ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: "ಸೋಜಿಗದ ಬೀಡು, ಗೀಜಗನ ಗೂಡು"; ಅಲ್ಲಿ ನೋಡು... ಕಲೆಯ ನೆಲೆವೀಡು!

ಗದಗ: ಗೀಜಗ ಸುಂದರವಾದ ಗೂಡು ಕಟ್ಟುವುದರಲ್ಲಿ ನಿಷ್ಣಾತ ಎಂಬುದು ಸರ್ವವೇದ್ಯ. ಗಾತ್ರದಲ್ಲಿ ಗುಬ್ಬಚ್ಚಿಯಂತಿರುವ ಈ ಹಕ್ಕಿಗಳಲ್ಲಿ ಗಂಡು ಹಕ್ಕಿಯು ಹೆಣ್ಣುಹಕ್ಕಿಗಳನ್ನು ಒಲಿಸಿಕೊಳ್ಳಲು ತನಗಿಂತಲೂ ಹತ್ತು ಪಟ್ಟು ದೊಡ್ಡದಾದ ಗೂಡು ಕಟ್ಟುತ್ತದೆ!

ಈಗ ಗದಗ ಜಿಲ್ಲೆಯಾದ್ಯಂತ ಗೀಜಗನ ಕಲಾ ನೈಪುಣ್ಯ ಕಣ್ಮನ ಸೆಳೆಯುತ್ತಿವೆ.

ಮುಂಗಾರಿನಲ್ಲಿ ಈ ಹಕ್ಕಿಗಳ ಸಂತಾನೋತ್ಪತ್ತಿ ಕ್ರಿಯೆ ಶುರುವಾಗುತ್ತದೆ. ಹಳ್ಳಗಳ ಪಕ್ಕದ ಮರ, ಈಚಲು, ತೆಂಗಿನ ಮರ ಹಾಗೂ ತಂತಿ ಉದ್ದಕ್ಕೂ ಗೂಡು ಕಟ್ಟಿರುವುದನ್ನು ನೋಡಬಹುದು. ನಾವು ಒಂದರ ಪಕ್ಕ ಒಂದು ಮನೆ ಕಟ್ಟಿಕೊಳ್ಳುವ ಹಾಗೇ ಹತ್ತಾರು ಹಕ್ಕಿಗಳು ಒಂದೆಡೆ ಸೇರಿ ಅಕ್ಕಪಕ್ಕದಲ್ಲೇ ಗೂಡುಗಳನ್ನು ಕಟ್ಟಿಕೊಳ್ಳುತ್ತವೆ.

ಹೊಸದಾಗಿ ಕಟ್ಟಿದ ಗೂಡುಗಳು ಸ್ವಲ್ಪ ಹಸಿರು ಬಣ್ಣದಲ್ಲಿರುವುದರಿಂದ ನೋಡಲು ಆಕರ್ಷಕವಾಗಿ ಕಾಣುತ್ತವೆ. ಕ್ರಮೇಣ ಬಿಸಿಲಿಗೆ ಆ ಗೂಡಿನ ಬಣ್ಣ ಮಾಸುತ್ತಾ ಹೋಗುತ್ತದೆ. ನೀರು, ಆಹಾರ ಮತ್ತು ಗೂಡುಕಟ್ಟಲು ಬೇಕಾಗುವ ಗರಿಯ ಎಳೆಗಳು ಹೆಚ್ಚು ಸಿಗುವ ಸ್ಥಳ ಆಯ್ಕೆ ಮಾಡಿಕೊಂಡು ಗೂಡು ಕಟ್ಟುವುದರಲ್ಲಿ ಈ ಹಕ್ಕಿಗಳು ತೋರುವ ಜಾಣ್ಮೆ ಬಲು ವಿಶೇಷ!

ಒಂದು ಗೂಡು ಕಟ್ಟಲು 25ರಿಂದ 50 ಸೆ.ಮೀ. ಉದ್ದದ ಸುಮಾರು 500-600 ಎಳೆಗಳು ಬೇಕಾಗುತ್ತವೆ. ಒಂದೊಂದೇ ಎಳೆಯನ್ನು ತಂದು ತಾಳ್ಮೆಯಿಂದ ಚೆಂದವಾಗಿ ಪೋಣಿಸಿ ಮಳೆ- ಗಾಳಿ, ಚಳಿ-ಬಿಸಿಲಿನಿಂದ ಕಾಪಾಡಿಕೊಳ್ಳಲು ಕಟ್ಟಿದ ಈ ಗೂಡುಗಳ ವಾಸ್ತುಶಿಲ್ಪ ಪ್ರಾವೀಣ್ಯತೆಗೆ ಸಾಟಿಯಿಲ್ಲ. ಈ ವಿಷಯದಲ್ಲಿ ಮನುಷ್ಯ ಎಂದಿಗೂ ಹಕ್ಕಿಗಳ ಜೊತೆ ಸ್ಪರ್ಧೆಗೆ ಇಳಿಯಲು ಮನಸ್ಸು ಮಾಡಲಾರ ಎಂಬುದಂತೂ ಕಟುಸತ್ಯ.

ಕಲಾ ಚಾತುರ್ಯದ ಗೀಜಗನ ಗೂಡು ನೋಡುತ್ತಿದ್ದರೆ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ಹೇಳಿದ ಒಂದು ಮಾತು ನೆನಪಾಗುತ್ತದೆ... "ಹಕ್ಕಿಗಳಿಗೆ ಗೂಡು ಕಟ್ಟುವುದಾಗಲಿ ಅದರ ವಾಸ್ತುಶಿಲ್ಪವಾಗಲೀ ನಮ್ಮಂತೆ ಪ್ರಜ್ಞಾಪೂರ್ವಕವಾದ ಕೆಲಸವಲ್ಲ ಎನ್ನಿಸುತ್ತದೆ. ಮೊಟ್ಟೆ ಇಡುವ ಹಾಗೆ, ಮರಿ ಮಾಡುವ ಹಾಗೆ, ಉಸಿರಾಡುವ ಹಾಗೆ, ಊಟ ಮಾಡುವ ಹಾಗೆ ಅದು ಅವುಗಳ ಅನುವಂಶೀಯ ಪ್ರವೃತ್ತಿಯೇ ಇರಬಹುದು. (ಮಿಂಚುಳ್ಳಿ ಪುಸ್ತಕದಿಂದ)

ವಿಜುವಲ್ಸ್ ಕೃಪೆ: ಸುರೇಶ ಲಮಾಣಿ‌, ಛಾಯಾಗ್ರಾಹಕರು ಗದಗ

Edited By :
PublicNext

PublicNext

19/08/2022 01:54 pm

Cinque Terre

38.76 K

Cinque Terre

1