ಗದಗ: ಬಯಲು ಸೀಮೆಯಲ್ಲೂ ಮಲೆನಾಡನ್ನು ನಾಚಿಸುವ ಅಂತರಗಂಗೆ ಗದಗ ಜಿಲ್ಲೆ ಗಜೇಂದ್ರಗಢ ಪಟ್ಟಣದ ಕಾಲಕಾಲೇಶ್ವರ( ಕಳಿಂಗ ಗಿರಿ) ಬೆಟ್ಟದಲ್ಲಿ ಸೃಷ್ಟಿಯಾಗಿದೆ. ನಿರಂತರ ಮಳೆ ಹಿನ್ನೆಲೆ ತುಂಗೆ, ಭದ್ರೆ ಜಲಧಾರೆಗಳು ಹಚ್ಚಹಸಿರಿನ ಬೆಟ್ಟದಲ್ಲಿ ಚಿಗುರೊಡೆದಿವೆ. ಹಸಿರ ಐಸಿರಿ... ಉಕ್ಕಿ ಹರಿಯುವ ನದಿ- ತೊರೆಗಳ ಜುಳುಜುಳು ನಿನಾದ ಪ್ರವಾಸಿಗರನ್ನು ಸೆಳೆಯುತ್ತಿವೆ.
ಮಳೆ ಶುರುವಾಗುತ್ತಿದ್ದಂತೆ ಬೆಟ್ಟ- ಗುಡ್ಡದಲ್ಲಿ ಅದೆಷ್ಟೋ ಜಲಧಾರೆ ಹುಟ್ಟಿ ಮಳೆಗಾಲ ಮುಗಿಯುತ್ತಿದ್ದಂತೆಯೇ ಮಾಯವಾಗಿ ಬಿಡುತ್ತವೆ. ಹಾಗಾಗಿ ಇವು ಸೀಸನ್ ಜಲಧಾರೆಗಳೆಂದೇ ಹೆಸರುವಾಸಿ. ಅಂತಹ ಅನೇಕ ಜಲಧಾರೆಗಳನ್ನು ತನ್ನ ಒಡಲೊಳಗಿಟ್ಟುಕೊಂಡಿರುವ ಕಾಲಕಾಲೇಶ್ವರ ಬೆಟ್ಟದ ವಿಹಂಗಮ ದೃಶ್ಯವನ್ನು ನೋಡೊದೇ ಬಲು ಚೆಂದ.
ಗದಗ ಜಿಲ್ಲೆಯ ಗಜೇಂದ್ರಗಢ ಪಟ್ಟಣದಿಂದ 3 ಕಿ.ಮೀ. ದೂರದಲ್ಲಿರುವ ಕಾಲಕಾಲೇಶ್ವರ ಬೆಟ್ಟದ ತಪ್ಪಲಿನಲ್ಲಿ ಈ ಸುಂದರ ಸೊಬಗಿದೆ. ಕಳಿಂಗ ಗಿರಿ, ಜಾಳಿಂದ್ರ ಗಿರಿ ಬೆಟ್ಟಗಳ ನಡುವಿನಲ್ಲಿ ಐಸಿರಿ ಮೈ ಚಾಚಿದೆ.
ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಏಕಶಿಲೆ ಬೆಟ್ಟದ ತುದಿಯಲ್ಲಿ ಸ್ವಯಂಭು ಲಿಂಗ ಸ್ವರೂಪಿ, ದಕ್ಷಿಣ ಕಾಶಿ ಖ್ಯಾತಿಯ ಶ್ರೀ ಕಾಲಕಾಲೇಶ್ವರ ದೇವಸ್ಥಾನವಿದೆ. ಸುತ್ತಲೂ ಅನೇಕ ಸುಕ್ಷೇತ್ರಗಳನ್ನು ಹೊಂದಿರುವ ಈ ತಾಣವು ರತ್ನಗಳ ಮಧ್ಯೆ ಕುಂದಣದಲ್ಲಿ ಕುಳ್ಳಿರಿಸಿದ ಮಾಣಿಕ್ಯದಂತೆ ಶೋಭಿಸುವ ಶ್ರೀ ಕಾಲಕಾಲೇಶನ ಎದುರಿಗೇ ಈ ಅಂತರಗಂಗೆ ಧುಮ್ಮುಕ್ಕುತ್ತಿದೆ.
PublicNext
08/08/2022 08:52 pm