ಮಂಡ್ಯ: ಜಲಸಿರಿ ಮಧ್ಯೆ ಹರಡಿಕೊಂಡಿರೋ ಮಣ್ಣಮರ ದ್ವೀಪ ಸಮೂಹ. ವೃಕ್ಷ ಮಡಿಲಲ್ಲಿ ಪಕ್ಷಿಗಳ ಚಿಲಿಪಿಲಿ ನಿನಾದ... ಬಂಡೆ ಮೇಲೆ ಬಿಸಿಲಿಗೆ ಮೈಯೊಡ್ಡಿರೊ ಮೊಸಳೆ ಹಿಂಡು. ಏನೀದು ನೀರು, ಪಕ್ಷಿ, ಮೊಸಳೆ ಅಂತೀರಾ. ಬನ್ನಿ... ಕೆಲಹೊತ್ತು ಈ "ಪಕ್ಷಿಲೋಕ" ಸುತ್ತಿ ಬರೋಣ. 40 ಎಕರೆಯಲ್ಲಿ ಮೈ ಚಾಚಿದ ನಡುಗಡ್ಡೆಯಲ್ಲಿ ಹತ್ತಾರು ಪ್ರಭೇದಗಳ ಕೊಕ್ಕರೆ, ಕಿಂಗ್ ಫಿಷರ್, ನೀರುಕೋಳಿ ಹೀಗೆ ದೇಶ- ವಿದೇಶಗಳ ಸಾವಿರಾರು ಪಕ್ಷಿಗಳು ಇಲ್ಲಿನ ನಿವಾಸಿಗಳು.
ಇದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕಾವೇರಿ ನೀರಿನ ನಡುಗಡ್ಡೆಯ ರಂಗನತಿಟ್ಟು ಪಕ್ಷಿಧಾಮ. ಬೆಂಗಳೂರಿನಿಂದ 150 ಕಿ.ಮೀ. ದೂರದ ಶ್ರೀರಂಗಪಟ್ಟಣಕ್ಕೆ ಹೊಂದಿಕೊಂಡಿರುವ ಈ ಪಕ್ಷಿಧಾಮ ಮೈಸೂರಿನಿಂದ ಕೇವಲ 15 ಕಿ.ಮೀ. ಹತ್ತಿರದಲ್ಲಿದೆ.
ಏಕದಿನದ ಪ್ರವಾಸಕ್ಕೆ ಬರುವ ಜನರಿಗಿದು ಪ್ರಕೃತಿ ರಮಣೀಯ ದೃಶ್ಯ ವೈಭವ ತಾಣ!
ಜೊತೆಗೆ ನೂರಾರು ಮೊಸಳೆ, ಮೀನು, ನೀರುನಾಯಿ ಇಲ್ಲಿನ ಗಣ್ಯಾತಿಗಣ್ಯರು. ಶ್ರೀಲಂಕಾ, ಮ್ಯಾನ್ಮಾರ್ ಸಹಿತ ಏಷ್ಯಾ, ಯೂರೋಪ್, ಆಫ್ರಿಕಾ ಖಂಡಗಳಿಂದ ಬರುವ ವಿವಿಧ ಪ್ರಭೇದಗಳ ಪಕ್ಷಿಗಳು ಡಿಸೆಂಬರ್ ನಂತರ ಇಲ್ಲಿಗೆ ಬಂದು ಮೊಟ್ಟೆ ಇಟ್ಟು, ಮರಿ ಮಾಡಿ ಏಪ್ರಿಲ್ ನಂತರ ತಾಯ್ನಾಡಿಗೆ ತೆರಳ್ತವೆ. ಪ್ರವಾಸಿಗರು ನಾನಾ ಪಕ್ಷಿ- ಮೊಸಳೆಗಳ ವೈಶಿಷ್ಟ್ಯತೆ ಕಂಡು ಖುಷಿಯಾಗ್ತಾರೆ ಅಂತಾರೆ ಬೋಟ್ ರೈಡರ್.
ಮೈಸೂರಿನ ಕಂಠೀರವ ನರಸಿಂಹರಾಜ ಒಡೆಯರ್ ಕ್ರಿ.ಶ.1648ರಲ್ಲಿ ಕಾವೇರಿ ನದಿನೀರಿಗೆ ಕಟ್ಟಿದ ಒಡ್ಡಿನಿಂದ ಇಲ್ಲಿ ದ್ವೀಪ ಸಮೂಹ ರೂಪುಗೊಂಡು ಪಕ್ಷಿಧಾಮವಾಗಿದೆ. 1998ರಲ್ಲಿ ವನ್ಯಜೀವಿ ಕಾಯ್ದೆಯಡಿ ರಾಜ್ಯ ಸರ್ಕಾರ ಈ ಪ್ರದೇಶಕ್ಕೆ ʼರಂಗನತಿಟ್ಟು ಪಕ್ಷಿಧಾಮʼವೆಂದು ಘೋಷಿಸಿತು.
PublicNext
13/02/2022 12:42 pm