ವರದಿ: ಗಣೇಶ್ ಹೆಗಡೆ
ಬೆಂಗಳೂರು: ನಿನ್ನೆ ರಾತ್ರಿ ಸುರಿದ ರಣಮಳೆಗೆ ಬೆಂಗಳೂರು ಉತ್ತರ ತಾಲೂಕು ಸಂಪೂರ್ಣ ಜಲಾವೃತಗೊಂಡಿದೆ. ಮನೆಗಳು ಸಂಪೂರ್ಣ ಜಲಾವೃತಗೊಂಡಿದೆ. ಎಂಎಸ್ ಪಾಳ್ಯದ ಬಹುತೇಕ ಮನೆಗಳಲ್ಲಿ ನಾಲ್ಕರಿಂದ ಐದು ಅಡಿ ನೀರು ನುಗ್ಗಿದೆ. ಮನೆಯಲ್ಲಿ ಇದ್ದ ಅಕ್ಕಿ, ಬೇಳೆ ಸೇರಿದಂತೆ ಇತರೆ ದಿನಸಿ ಪದಾರ್ಥಗಳು ನೀರು ಪಾಲಾಗಿದೆ. ಪರಿಣಾಮ ಸ್ಥಳೀಯ ನಿವಾಸಿಗಳು ರಸ್ತೆಯಲ್ಲೇ ರಾತ್ರಿ ಕಳೆದಿದ್ದಾರೆ.
ಅಲ್ಲಾಳ ಸಂದ್ರ ಕೆರೆ ಕೋಡಿ ಹರಿದು ನೀರು ಉಕ್ಕಿದೆ. ಇನ್ನು ಕೆರೆಯಿಂದ ಸಾವಿರಾರು ಮೀನುಗಳು ಹೊರ ಬಿದ್ದಿವೆ. ಮೀನುಗಳನ್ನು ಕಂಡ ಯುವಕರು ಅವುಗಳನ್ನು ಹಿಡಿಯಲು ಮುಂದಾಗಿದ್ದರು. ಕೋಗಿಲು ಕ್ರಾಸ್ ಬಳಿ ಇರುವ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ ಕೆರೆ ನೀರು ನುಗ್ಗಿದೆ.
ಕೆರೆ ಒತ್ತುವರಿ ಮಾಡಿ ಅಪಾರ್ಟ್ಮೆಂಟ್ ಕಟ್ಟಿರುವ ದೂರು ಕೇಳಿ ಬಂದಿದೆ. ರಾಜ ಕಾಲುವೆ ನೀರು ಇದೀಗ ಅಪಾರ್ಟ್ಮೆಂಟ್ ಸೇರಿದೆ. ಇದರಿಂದ ನೀರು ಹೊರ ಹಾಕಲು ಜನರು ಹರ ಸಾಹಸ ಪಡುತ್ತಿದ್ದಾರೆ. ಸ್ಥಳಕ್ಕೆ ಶಾಸಕ ಎಸ್ ಅರ್ ವಿಶ್ವನಾಥ, ತಹಶೀಲ್ದಾರ, ಪಾಲಿಕೆ ಅಧಿಕಾರಿಗಳು ಆಗಮಿಸಿದ್ದಾರೆ. ಜನರ ಓಡಾಟಕ್ಕೆ ಬೋಟ್ ವ್ಯವಸ್ಥೆ ಮಾಡಲಾಗಿದೆ.
PublicNext
22/11/2021 01:07 pm