ದಾವಣಗೆರೆ: ಜಿಲ್ಲೆಯ ಕೆಲವೆಡೆ ಚಿರತೆ ಕಾಟ ಶುರುವಾಗಿದೆ. ಚನ್ನಗಿರಿ ತಾಲೂಕಿನ ದಾಗಿನಕಟ್ಟೆಯಲ್ಲಿ ಕಾಣಿಸಿಕೊಂಡಿದ್ದ ಚಿರತೆ ಜನರಲ್ಲಿ ಆತಂಕ ಮೂಡಿಸಿತ್ತು. ಈಗ ನ್ಯಾಮತಿ ತಾಲೂಕಿನ ದಾನಿಹಳ್ಳಿ ಸಮೀಪ ಕಳೆದ ನಾಲ್ಕೈದು ದಿನಗಳಿಂದಲೂ ಚಿರತೆಗಳ ಓಡಾಟ ಹಿನ್ನೆಲೆಯಲ್ಲಿ ಜನರು ಭಯಭೀತರಾಗಿದ್ದಾರೆ. ಜಮೀನಿಗೆ ಹೋಗಲು ರೈತರು ಹೆದರುವಂತ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಮಕ್ಕಳನ್ನು ಒಬ್ಬರೇ ಕಳುಹಿಸಲು ಭಯಪಡುವಂತ ವಾತಾವರಣ ನಿರ್ಮಾಣ ಆಗಿದೆ.
ದಾನಿಹಳ್ಳಿ ಸಮೀಪ ಕಳೆದ ನಾಲ್ಕು ದಿನಗಳ ಹಿಂದೆ ಎರಡು ಚಿರತೆಗಳು ಪ್ರತ್ಯಕ್ಷವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಇನ್ನು ಸ್ಥಳೀಯರಿಗೆ ತಾಯಿ ಮತ್ತು ಅದರ ಮರಿ ಚಿರತೆಗಳು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಇನ್ನು ಚಿರತೆಗಳ ಸೆರೆ ಹಿಡಿಯಲು ಅಲ್ಲಲ್ಲಿ ಬೋನುಗಳನ್ನು ಅಳವಡಿಸಲಾಗಿದೆ.
ಇನ್ನು ಸ್ಥಳಕ್ಕೆ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರು, ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ಮಾಡಿ ಕೂಡಲೇ ಚಿರತೆಗಳನ್ನು ಹಿಡಿಯುವಂತೆ ಸೂಚನೆ ನೀಡಿದರು. ಮಾತ್ರವಲ್ಲ ಸ್ವತಃ ಅವರೇ ನಿಂತು ಬೋನುಗಳನ್ನು ಅಳವಡಿಸಿದರು. ಇನ್ನು ಈ ವೇಳೆ ಮಾತನಾಡಿದ ಅವರು, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಜನರು ಚಿರತೆಗಳನ್ನು ಹಿಡಿಯುವವರೆಗೆ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದರು.
PublicNext
07/09/2021 04:20 pm