ಮೈಸೂರು: ಇಂದು ವಿಶ್ವ ಆನೆಗಳ ದಿನ ಆನೆ ಮತ್ತು ಮಾನವನ ನಡುವೆ ಪ್ರೀತಿ ವಿಶ್ವಾಸಕ್ಕಿಂತಲೂ ಹೆಚ್ಚಾಗಿ ಸಂಘರ್ಷ ನಡೆದಿರುವುದೇ ಹೆಚ್ಚು.
ಆನೆಗಳು ಕಾಡಂಚಿನ ಗ್ರಾಮಗಳಿಗೆ ನುಗ್ಗಿ, ರೈತರ ಫಸಲನ್ನು ನಾಶ ಮಾಡುವ ಘಟನೆಗಳು ನಡೆಯುತ್ತಲೇ ಇವೆ.
ಹಿಂದಿನ ವರ್ಷ 2020–21ನೇ ಸಾಲಿನಲ್ಲಿ ಒಟ್ಟು 13 ಆನೆಗಳು ಜೀವ ಕಳೆದುಕೊಂಡಿದ್ದವು. ಪ್ರಸಕ್ತ ಸಾಲಿನಲ್ಲಿ 3 ಆನೆಗಳು ಮೃತಪಟ್ಟಿವೆ. ಮಾನವನಿಂದ ಆನೆಗಳ ಸಾವು ಸಂಭವಿಸುತ್ತಿರುವ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಆದರೆ, ಆನೆಗಳು ಜನವಸತಿ ಪ್ರದೇಶಗಳತ್ತ ಹಾಗೂ ರೈತರ ಹೊಲಗಳತ್ತ ನುಗ್ಗುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ.
ನಾಗರಹೊಳೆ ವ್ಯಾಪ್ತಿಯಲ್ಲಿ ಒಟ್ಟು 250 ಕಿ.ಮೀನಷ್ಟು ಅರಣ್ಯಕ್ಕೆ ಹಲವು ಗ್ರಾಮಗಳು ಹೊಂದಿಕೊಂಡಂತಿವೆ. ಎಲ್ಲ ಕಡೆ ಆನೆ ಕಂದಕ ತೋಡಲಾಗಿದೆ. ರೈಲ್ವೆ ಕಂಬಿಗಳ ತಡೆಗೋಡೆ, ಸೋಲಾರ್ ಹ್ಯಾಂಗಿಂಗ್ ಫೆನ್ಸ್ ಗಳನ್ನು ಹಾಕಲಾಗಿದೆ.
ಇಷ್ಟೆಲ್ಲ ಕ್ರಮಗಳ ಹೊರತಾಗಿಯೂ ಆನೆಗಳು ಇವುಗಳನ್ನೆಲ್ಲ ದಾಟಿ ಗ್ರಾಮಗಳತ್ತ ನುಗ್ಗುತ್ತಿರುವ ಉದಾಹರಣೆಗಳೂ ಇವೆ.
ಜುಲೈ ತಿಂಗಳಿನಲ್ಲಿ ಹುಣಸೂರು ತಾಲ್ಲೂಕಿನ ಹೊಸಪೆಂಜಹಳ್ಳಿ ಭಾಗದಲ್ಲಿ ರೈಲ್ವೆ ಹಳಿ ತಡೆಗೋಡೆ ದಾಟಿ ಆನೆಗಳು ಫಸಲನ್ನು ನಾಶಗೊಳಿಸಿದ್ದವು.
ಜೂನ್ ನಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನ ಜಿ.ಎಂ.ಹಳ್ಳಿ ಗ್ರಾಮದಲ್ಲಿ ಆನೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.
ಮೇ ತಿಂಗಳಿನಲ್ಲಿ ಹುಣಸೂರು ತಾಲ್ಲೂಕಿನ ನೇರಳಕುಪ್ಪೆ ಗ್ರಾಮ, ಸರಗೂರು ತಾಲ್ಲೂಕಿನ ಕಲ್ಲಹಳ್ಳ ಗ್ರಾಮಗಳಲ್ಲಿ ಬೆಳೆನಾಶ ಮಾಡಿದ್ದವು.
ಮಾರ್ಚ್ ತಿಂಗಳಿನಲ್ಲಿ ಪಿರಿಯಾಪಟ್ಟಣ ತಾಲ್ಲೂಕಿನ ಬೆಮ್ಮತ್ತಿಕೊಪ್ಪಲು ಹಾಗೂ ತಿಮ್ಮನಹಳ್ಳಿ ಗ್ರಾಮಗಳಲ್ಲಿ ಆನೆಗಳು ದಾಳಿ ನಡೆಸಿದ್ದವು.
ಹೀಗೆ ಮಾನವ ಮತ್ತು ಆನೆಗಳ ನಡುವಿನ ಸಂಘರ್ಷ ಮುಂದುವರೆದಿದೆ.
PublicNext
12/08/2021 03:41 pm