ಮಂಗಳೂರು: ಸಮುದ್ರ- ಸಾಗರ ಸಾಮ್ರಾಜ್ಯದಲ್ಲಿ ತಿಮಿಂಗಿಲವೇ ಸಾಮ್ರಾಟ. ಈ ಪರ್ವತ ದೇಹಿಗೆ ಅಗಾಧ ಜಲ ರಾಶಿಯೇ ಆಟಕ್ಕೆ ಮೈದಾನ, ಬೇಟೆಗೆ ಕಾನನ. ಹೀಗೆ ಶರಧಿಯ ಮಡಿಲಲ್ಲೇ ಸುದೀರ್ಘ ಜೀವನ.
ನೆಲದಲ್ಲಿ ಆನೆ ಹೋಗಿದ್ದೇ ದಾರಿ. ಆದರೆ, ಜಲದಲ್ಲಿ ತಿಮಿಂಗಿಲ ಸಾಗಿದರೆ ಅಲ್ಲಿ 'ಸುಳಿಗಾಳಿ!' ಮತ್ಸ್ಯ ಸಂಕುಲ ಚೆಲ್ಲಾಪಿಲ್ಲಿ.
ಸಾಮಾನ್ಯವಾಗಿ ತಿಮಿಂಗಿಲಗಳು ಮೀನುಗಾರರ ತಂಟೆಗೆ ಹೋಗುವುದಿಲ್ಲ. ಈ ಕಡಲ ದೈತ್ಯನಿಗೆ ಮಾನವ ತೃಣ ಸಮಾನ ತಾನೇ? ಆದ್ದರಿಂದ ತನ್ನ ಜಲಲೋಕದಲ್ಲೇ ತನ್ಮಯ ಈ ಅಸಾಮಾನ್ಯ. ಆದರೆ, ತಾನು ನೀರಾಟದಲ್ಲಿ ತೊಡಗಿದ್ದಾಗ ಅಥವಾ ವಿಹಾರದಲ್ಲಿದ್ದಾಗ ಬೋಟ್ ನಲ್ಲಿರುವ ಮೀನುಗಾರರೇನಾದರೂ ಕೀಟಲೆಗಾಗಿ ಯಾವುದೋ ವಸ್ತು ಎಸೆದರೆ ಅಥವಾ ತಮಾಷೆಯಾಗಿ ಬೊಬ್ಬೆ ಹಾಕಿದರೆ ಇವರಿಗೆ ಬುದ್ಧಿ ಕಲಿಸಬೇಕೆಂದು ಬೋಟ್ ನ ಸಮೀಪಕ್ಕೇ ಬಂದು ನೀರನ್ನು ಅವರ ಮೇಲೆಯೇ ಚಿಮ್ಮಿಸಿ ದಿಗಿಲುಗೊಳಿಸುತ್ತದೆ, ಖುಷಿ ಪಡುತ್ತದೆ. ಆದರೆ, ಪ್ರಾಣಕ್ಕೇನೂ ಅಪಾಯ ಮಾಡದೆ ಬಳಿಕ ತನ್ನ ಪಾಡಿಗೆ ಹೊರಟು ಹೋಗುತ್ತದೆ.
ಮಂಗಳೂರು ಕರಾವಳಿ ಮೀನುಗಾರರಿಗೆ ತಿಮಿಂಗಿಲಗಳೆಂದರೆ ದೈವೀ ಭಾವನೆ ಇದೆ. ಹಗಲು- ರಾತ್ರಿಯ ಮೀನುಗಾರಿಕೆ ಸಂದರ್ಭ ತಿಮಿಂಗಿಲಗಳು ದೋಣಿ ಅಥವಾ ಬೋಟ್ ನ ಬಲು ಸನಿಹದಲ್ಲಿ ಕಂಡು ಬಂದರೆ, "ಅಜ್ಜಾ, ಎಂಕ್ಲೆಗ್ ದಾಲ ಮನ್ಪೊಡ್ಚಿ" (ಅಜ್ಜಾ, ನಮಗೆ ಏನೂ ಮಾಡಬೇಡ) ಎಂದು ಪ್ರಾರ್ಥಿಸುತ್ತಾರೆ. ಕೆಲವೊಮ್ಮೆ ಮಾತ್ರ ತಿಮಿಂಗಿಲಗಳ ಓಡಾಟದ ಭರದಲ್ಲಿ ಬಲೆ ಹಾನಿಗೊಳ್ಳುತ್ತವೆಯೇ ಹೊರತು, ಉಳಿದಂತೆ ಈ ' ಮತ್ಸ್ಯ ಶ್ರೇಷ್ಠ' ಮನುಷ್ಯ ಸ್ನೇಹಿ ಹಾಗೂ ಸಾಗರ ಸಂಪತ್ತಿನ ಮಹಾಚೈತನ್ಯವೇ ಅಲ್ಲವೇ?.
ಮನೋಜ್ ಕೆ.ಬೆಂಗ್ರೆ, ಪಬ್ಲಿಕ್ ನೆಕ್ಸ್ಟ್
PublicNext
03/08/2021 06:55 pm