ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ತೋಟಕ್ಕೆ ನುಗ್ಗಿದ ಕೆರೆ ನೀರು; ನೂರಾರು ಎಕರೆ ಅಡಿಕೆ ಫಸಲು ಮಳೆ ಪಾಲು!

ತುಮಕೂರು: ಜಿಲ್ಲೆಯಲ್ಲಿ ನಿರಂತರ ಮಳೆ ಮುಂದುವರೆದಿದ್ದು, 300 ಎಕರೆ ಅಡಿಕೆ ತೋಟ ಸಂಪೂರ್ಣ ಜಲಾವೃತಗೊಂಡಿದೆ! ರೈತರು ಬೆಳೆ ನಾಶದಿಂದಾಗಿ ಕಂಗಾಲಾಗಿದ್ದಾರೆ.

ತುಮಕೂರು ತಾಲೂಕಿನ ನರಸಾಪುರ, ಹೆಬ್ಬಾಕ, ಕಳಸೇಗೌಡನ ಪಾಳ್ಯ ಗ್ರಾಮಗಳಲ್ಲಿ ಈ ಪರಿಸ್ಥಿತಿ ಕಂಡು ಬಂದಿದ್ದು, ಈ ಭಾಗದಲ್ಲಿರುವ ರೈತರ ಅಡಿಕೆ ತೋಟಕ್ಕೆ ಬುಗುಡನಹಳ್ಳಿ ಕೆರೆಯ ಹಿನ್ನೀರು ನುಗ್ಗಿದೆ.

ಕಳೆದ 10 ದಿನಗಳಿಂದಲೂ ತೋಟ ಮಳೆನೀರಿನಿಂದ ಆವೃತಗೊಂಡಿದ್ದು, ರೈತರು ತೋಟದೊಳಕ್ಕೆ ಹೋಗಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಕೈಗೆ ಬಂದ ಅಡಿಕೆ ಫಸಲು ಕಳೆದುಕೊಳ್ಳುವ ಆತಂಕದಲ್ಲಿ ರೈತರಿದ್ದಾರೆ.

ತೋಟ ಜಲಾವೃತವಾಗಿರುವುದರಿಂದ ಅಡಿಕೆ ಗೊನೆ ನೆಲಕ್ಕೆ ಉದುರುತ್ತಿವೆ. 50ಕ್ಕೂ ಹೆಚ್ಚು ರೈತರಿಗೆ ಸಂಕಷ್ಟ ಎದುರಾಗಿದೆ. ತುಮಕೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಬುಗುಡನಹಳ್ಳಿ ಕೆರೆಗೆ ಮಳೆ ಪ್ರಾರಂಭವಾಗುವ ಮೊದಲು ಹೇಮಾವತಿ ನೀರು ಹರಿಸಲಾಗಿತ್ತು. ಬಳಿಕ ನಿರಂತರ ಮಳೆ ಸುರಿದ ಪರಿಣಾಮ ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.

ಬುಗುಡನಹಳ್ಳಿ ಕೆರೆ ನೀರನ್ನು ಹೊರಗಾದರೂ ಬಿಡಿ, ಇಲ್ಲವಾದರೆ ಇಲ್ಲಿರುವ ನಮ್ಮ ಜಮೀನುಗಳನ್ನು ನೀವೇ ಸ್ವಾಧೀನ ಪಡಿಸಿಕೊಳ್ಳಿ ಎಂದು ಇಲ್ಲಿನ ರೈತರು ಅಲವತ್ತುಕೊಳ್ಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಸ್ಪಂದಿಸಿ ಎಂಬುದು ನಮ್ಮ ಆಗ್ರಹ.

ವರದಿ: ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್‌ ತುಮಕೂರು

Edited By : Manjunath H D
PublicNext

PublicNext

08/08/2022 07:45 pm

Cinque Terre

31.44 K

Cinque Terre

0