ದಾವಣಗೆರೆ: ಭಾರೀ ಮಳೆ ಸುರಿದ ಪರಿಣಾಮ ಉಕ್ಕಿ ಹರಿದ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಮಹಿಳೆ ಹಾಗೂ ಕುರಿ ಮರಿ ರಕ್ಷಣೆ ಮಾಡಿದ ಘಟನೆ ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದಿದೆ.
ಆಲೂರು ಗ್ರಾಮದಲ್ಲಿ ಮಹಿಳೆಯು ಹೊಲಕ್ಕೆ ಕೆಲಸಕ್ಕೆಂದು ಹೋಗಿದ್ದರು. ಸಂಜೆಯ ಹೊತ್ತಿಗೆ ಧಾರಾಕಾರ ಮಳೆ ಸುರಿಯಿತು. ಹಳ್ಳದಲ್ಲಿ ಸಮಯ ಕಳೆದಂತೆ ನೀರಿನ ಒಳಹರಿವು ಹೆಚ್ಚಿತ್ತು. ಹಳ್ಳ ದಾಟಿ ಬರುವಾಗ ನೀರಿನ ಪ್ರವಾಹಕ್ಕೆ ಸಿಲುಕಿದರು. ಕುರಿ ಮರಿಗಳು ಸಹ ಕೊಚ್ಚಿ ಹೋಗುವ ಭೀತಿ ಎದುರಾಯಿತು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಗ್ರಾಮಸ್ಥರು ಆಗಮಿಸಿದರು. ಈ ವೇಳೆ ಹಗ್ಗದ ಸಹಾಯದಿಂದ ಮಹಿಳೆ ಹಾಗೂ ಕುರಿ ಮರಿಯನ್ನು ರಕ್ಷಿಸಿದರು. ಇಲ್ಲದಿದ್ದರೆ ನೀರಿನಲ್ಲಿ ಕೊಚ್ಚಿ ಹೋಗಿ ಪ್ರಾಣಾಪಾಯ ಸಂಭವಿಸಲಿತ್ತು. ಗ್ರಾಮಸ್ಥರ ಸಕಾಲಿಕ ನೆರವಿನಿಂದ ಮಹಿಳೆ ಬದುಕಿತು ಬಡಜೀವ ಎಂದು ನಿಟ್ಟುಸಿರುಬಿಟ್ಟರು. ಮೂಕ ಪ್ರಾಣಿಯನ್ನು ರಕ್ಷಿಸಿದ ಗ್ರಾಮಸ್ಥರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಮಹಾ ಮಳೆಗೆ ದಾವಣಗೆರೆ ತಾಲೂಕಿನ ಅಣಜಿ ಮಾರ್ಗದ ಹರಪನಹಳ್ಳಿ ಹಾಗೂ ಹಡಗಲಿ ಹೆದ್ದಾರಿಯು ಸಂಪೂರ್ಣ ಬಂದ್ ಆಗಿತ್ತು. ಗೊಲ್ಲರಹಳ್ಳಿ ಗ್ರಾಮದ ಹಳ್ಳ ಅಪಾಯ ಮಟ್ಟದಲ್ಲಿ ಹರಿದ ಪರಿಣಾಮ ರಸ್ತೆಯು ನೀರಿನಿಂದ ಜಲಾವೃತಗೊಂಡಿತ್ತು. ರಸ್ತೆಯ ಮೇಲೆ ಸುಮಾರು ಆರರಿಂದ ಏಳು ಅಡಿಯಷ್ಟು ಸತತ ಐದು ಗಂಟೆಯವರೆಗೆ ನೀರಿತ್ತು. ಬಸ್ ಸೇರಿದಂತೆ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಆಲೂರುಹಟ್ಟಿ ಹಾಗೂ ಅಲೂರು, ಕಾಡಜ್ಜಿ ಮಾರ್ಗವಾಗಿ ಹೋಗುವ ರಸ್ತೆಗಳು ಸಹ ಪೂರ್ತಿ ಜಲಾವೃತ ಆಗಿದ್ದವು. ಇದರಿಂದಾಗಿ ಜನರು ತೊಂದರೆ ಅನುಭವಿಸುವಂತಾಯಿತು.
PublicNext
16/06/2022 09:15 am