ಪ್ರತಿಯೊಬ್ಬ ಕನ್ನಡಿಗರೂ ಚಾರ್ಮಾಡಿ ಘಟ್ಟದ ಹೆಸರು ಕೇಳಿಯೇ ಇರ್ತಾರೆ. ಅಲ್ಲಿನ ಜೀವ ಪರಿಸರ ವ್ಯವಸ್ಥೆ. ನೀರಿನ ಸೆಲೆ, ಮಳೆಗಾಲದ ಮುದ ನೀಡುವ ಪ್ರಯಾಣ. ಪರ್ವತದ ಇಕ್ಕೆಲದಲ್ಲಿ ಸಣ್ಣಗೆ ಸುರಿವ ತೊರೆಗಳು. ದಟ್ಟವಾಗಿ ಆವರಿಸುವ ತಣ್ಣನೆಯ ಮಂಜು. ಇದೆಲ್ಲವನ್ನೂ ಅಲ್ಲಿನ ಪ್ರಯಾಣಿಕರು ಅನುಭವಿಸಿರುತ್ತಾರೆ.
ಇಷ್ಟರ ಮಟ್ಟಿಗೆ ತನ್ನೊಡಲಲ್ಲಿ ಅಂದ ಚೆಂದ ಹೊಂದಿರುವ ಈ ಚಾರ್ಮಾಡಿ ಘಟ್ಟದಲ್ಲಿ ಅನೇಕ ಬಾರಿ ಅಪಾಯದ ಮುನ್ಸೂಚನೆಗಳು ಸಿಗುತ್ತಲೇ ಇವೆ. ಈಗ ಅಲ್ಲಿ ಗುಡ್ಡ ಕುಸಿತ ಕಾಮನ್ ಎನ್ನುವಂತಾಗಿದೆ. ಎತ್ತರದ ಪ್ರದೇಶಗಳಿಂದ ಬೃಹತ್ ಬಂಡೆಗಳು ಉರುಳಿ ರಸ್ತೆಗೆ ಬೀಳುತ್ತಲೇ ಇವೆ. ಇದು ಅಲ್ಲಿನ ನಿತ್ಯ ಪಯಣಿಗರನ್ನು ಸದಾ ಆತಂಕಕ್ಕೆ ದೂಡಿದೆ. ಕಳೆದ ವರ್ಷದ ಭಾರೀ ಮಳೆಗೆ ಚಾರ್ಮಾಡಿ ರಸ್ತೆ ಹದಗೆಟ್ಟಿತ್ತು. ಈ ಸಲವೂ ಹೆಚ್ಚು ಕಡಿಮೆ ಅಂತದ್ದೇ ಮಳೆಯಾಗಿದ್ದರಿಂದ ಅಲ್ಲಿನ ರಸ್ತೆ ಮತ್ತಷ್ಟು ಹದಗೆಟ್ಟು ಅಲ್ಲೋಕ ಕಲ್ಲೋಲವಾಗಿದೆ.
ಸುಮಾರು 30 ಕಡೆಗಳಲ್ಲಿ ಗುಡ್ಡ ಕುಸಿತದಿಂದ ಚಾರ್ಮಾಡಿ ಘಾಟ್ ರಸ್ತೆ ಬರೋಬ್ಬರಿ 6 ತಿಂಗಳು ಬಂದ್ ಆಗಿತ್ತು. ಹಿಂದೆಂದೂ ಆಗಿರದ ರೀತಿಯಲ್ಲಿ ರಸ್ತೆಯ ಅವಸ್ಥೆ ದುರಾವಸ್ಥೆಯಾಗಿತ್ತು. ಹೀಗಾಗಿ ಸದ್ಯ ಈ ರಸ್ತೆಯಲ್ಲಿ ಬೈಕ್, ಜೀಪ್ ಕಾರು, ಹಾಗೂ ಪ್ರವಾಸಿ ಟಿಟಿ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗ್ತಾ ಇದೆ.
ಅನೇಕ ಬಾರಿ ಬಂಡೆಗಳು ಉರುಳಿ ಬಿದ್ದಾಗ ಕೂದಲೆಳೆ ಅಂತರದಲ್ಲಿ ಅನೇಕ ವಾಹನಗಳು ಪಾರಾಗಿವೆ. ಹೀಗಾಗಿ ಇಲ್ಲಿ ಸಂಚರಿಸುವ ಎಲ್ಲ ಪ್ರಯಾಣಿಕರು ಜೀವ ಅಂಗೈಲಿಟ್ಟುಕೊಂಡೇ ಸಾಗುತ್ತಾರೆ.
ಭಾರೀ ಮಳೆಯಾದಾಗ ಗುಡ್ಡಕ್ಕೆ ಅಂಟಿಕೊಂಡಿರುವ ಬೃಹತ್ ಬಂಡೆಗಲ್ಲುಗಳ ತಳಭಾಗ ಸಡಿಲಗೊಳ್ಳುತ್ತವೆ. ಇದು ಬಂಡೆಗಳು ಉರುಳಿ ಬೀಳಲು ಕಾರಣ. ಆದ್ರೆ ಸಂಬಂಧಿಸಿದ ಇಲಾಖೆಯವರು ಇದನ್ನ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ ಅಚಾನಕ್ಕಾಗಿ ಉರುಳಿ ಬೀಳುವ ಬಂಡೆಗಲ್ಲುಗಳು ಚಾರ್ಮಾಡಿ ಪ್ರಯಾಣಿಕರನ್ನು ಇನ್ನಿಲ್ಲದ ಆತಂಕಕ್ಕೆ ತಳ್ಳಿವೆ.
PublicNext
23/10/2020 12:25 pm