ಬೆಂಗಳೂರು : ನಾಳೆ ಮತ್ತೊಂದು ಹಂತದ ವಾಯುಭಾರ ಕುಸಿತ ಸಂಭವಿಸಲಿದ್ದು, ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈಗಾಗಲೇ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಭಾರೀ ಮಳೆಯಾಗಿದ್ದು ಪ್ರವಾಹಕ್ಕೆ ತುತ್ತಾಗಿರುವ ತೆಲಂಗಾಣ, ಉತ್ತರ ಕರ್ನಾಟಕ ಹಾಗು ಮಹಾರಾಷ್ಟ್ರದಲ್ಲಿ ಮಳೆ ಮುಂದುವರೆಯಲಿದೆ. ಆಂಧ್ರ ಪ್ರದೇಶದಲ್ಲಿ ಅ.19ರಿಂದ ಮತ್ತೊಂದು ಹಂತದ ವಾಯುಭಾರ ಕುಸಿತ ಸಂಭವಿಸಲಿದ್ದು, ಜೊತೆಗೆ ರಾಯಲಸೀಮಾ, ಕರಾವಳಿಯಲ್ಲಿಯೂ ವರುಣನ ಅಬ್ಬರ ಮುಂದಿನ 24 ಗಂಟೆ ಹೆಚ್ಚಿರಲಿದೆ. ಈ ಹಿನ್ನಲೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಕೂಡ ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ನಿರೀಕ್ಷೆ ಇದೆ. ಅ.20 ಮತ್ತು 21ರಂದು ಉತ್ತರ ಒಳನಾಡಿನಲ್ಲಿ ಹಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೀದರ್, ರಾಯಚೂರು, ಗದಗ, ಬಾಗಲಕೋಟೆ, ಕೊಪ್ಪಳ, ಕಲ್ಬುರ್ಗಿ ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದ್ದು, ಯೆಲ್ಲೋ ಆಲರ್ಟ್ ಘೋಷಣೆ ಮಾಡಲಾಗಿದೆ.
ಕರಾವಳಿ ಮತ್ತು ಮಹಾರಾಷ್ಟ್ರದ ಸುತ್ತಮುತ್ತ ಕೂಡ ಕಡಿಮೆ ಒತ್ತಡ ಉಂಟಾಗಿದೆ. ಇಲ್ಲಿನ ಮಳೆಯ ಮೋಡಗಳು ಮುಂದಿನ 24 ಗಂಟೆಗಳಲ್ಲಿ ಪಶ್ಚಿಮದ ಕಡೆ ಚಲಿಸಲಿದ್ದು, ಉತ್ತರ ಮಹಾರಾಷ್ಟ್ರ, ದಕ್ಷಿಣ ಕರಾವಳಿಯ ಸಮೀಪ ಚಂಡಮಾರುತಕ್ಕೆ ತಿರುಗುವ ಸಾಧ್ಯತೆ ಇದೆ. ಇದರಿಂದ ಉತ್ತರ ಕರ್ನಾಟಕದ ಹಲವು ಭಾಗ ಸೇರಿದಂತೆ ತೆಲಂಗಾಣದಲ್ಲಿ ಭಾರೀ ಮಳೆಯಾಗಲುವ ಸಾಧ್ಯತೆ ಇದೆ.
ಈಗಾಗಲೇ ಕಳೆದ ಒಂದು ವಾರದಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಗೆ ಉತ್ತರ ಕರ್ನಾಟಕದ ಏಳು ಜಿಲ್ಲೆಗಳು, ತೆಲಂಗಾಣ, ಮಹಾರಾಷ್ಟ್ರ ತತ್ತರಿಸಿ ಹೋಗಿವೆ. ಮಳೆ ನಿಂತರೂ ಪ್ರವಾಹ ತಗ್ಗದ ಪರಿಣಾಮ ಜನರು ಕಣ್ಣೀರು ಹಾಕುವಂತೆ ಆಗಿದೆ. ಪ್ರವಾಹದಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಗ್ರಾಮಗಳು ಜಲಾವೃತಗೊಂಡಿದೆ. ಈಗ ಮತ್ತೆ ವಾಯುಭಾರ ಕುಸಿದು ಮಳೆಯಾದರೆ, ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
PublicNext
18/10/2020 01:14 pm