ಮೈಸೂರು: ಕಬ್ಬಿಗೆ ನೀಡುವ ಎಫ್ಆರ್‌ಪಿ ಮೊತ್ತವನ್ನು ಪುನರ್ ಪರಿಶೀಲಿಸಬೇಕು, ವಿದ್ಯುತ್ ತಿದ್ದುಪಡಿ ಕೈಬಿಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.26ರಂದು 'ವಿಧಾನಸೌಧ ಚಲೋ' ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
‘ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ರೈತರಿಂದ ಹಣ ವಸೂಲಿ ಮಾಡುವ ಹುನ್ನಾರ ನಡೆಸಿದೆ. ರಾಜ್ಯದಲ್ಲಿ 40 ಲಕ್ಷ ಕೃಷಿ ಪಂಪ್‌ಸೆಟ್‌ಗಳಿದ್ದು, ಖಾಸಗೀಕರಣ ಪ್ರಸ್ತಾವ ಕೈಬಿಡಬೇಕು’ ಎಂದು ಕೋರಿದ್ದಾರೆ.
‘ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲಬೆಲೆ (ಎಂಎಸ್‌ಪಿ)ಯ ಖಾತರಿ ನೀಡಬೇಕು. ಬೆಂಬಲಬೆಲೆ ನಿಗದಿಗಾಗಿ ಕೇಂದ್ರ ಸರ್ಕಾರ ರಚಿಸಿರುವ 26 ಜನರ ಸಮಿತಿಯಲ್ಲಿ ರೈತ ವಿರೋಧಿ, ಸರ್ಕಾರದ ಪರ ಸದಸ್ಯರೇ ಇದ್ದು, ಅವರನ್ನು ಕೂಡಲೇ ಬದಲಿಸಬೇಕು’ ಎಂದು ಆಗ್ರಹಿಸಿದರು.
10 ಲಕ್ಷ ಹೆಕ್ಟೇರ್ ಬೆಳೆ ನಾಶ: ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್‌ನಷ್ಟು ಬೆಳೆ ನಾಶವಾಗಿದೆ. ಆದರೆ, ಕೃಷಿ ಸಚಿವರು 6.80 ಲಕ್ಷ ಹೆಕ್ಟೇರ್ ಲೆಕ್ಕ ಕೊಡುತ್ತಿದ್ದಾರೆ. ಕೇಂದ್ರ ತಂಡ ಕಾಟಾಚಾರದ ಸಮೀಕ್ಷೆ ನಡೆಸಿದ್ದು, ನಷ್ಟದ ಅಂದಾಜು ಮಾಡಲು ವಿಫಲವಾಗಿದೆ ಎಂದು ಅವರು ದೂರಿದರು.
PublicNext
18/09/2022 05:03 pm