ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಮಕ್ಕಳ ದಸರಾಗೆ ಚಾಲನೆ ದೊರೆತಿದೆ. ಮಕ್ಕಳ ದಸರಾ ಉದ್ಘಾಟನೆಗೆ ಆಗಮಿಸಿದ್ದ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕಾಡಿನ ಮಕ್ಕಳ ಜತೆ ನಕ್ಕು ನಲಿದಿದ್ದಲ್ಲದೆ, ಮಕ್ಕಳ ಜತೆ ಹೆಜ್ಜೆ ಹಾಕಿ ಸಂಭ್ರಮಪಟ್ಟರು.
ಮಾವುತರು, ಕಾವಾಡಿಗಳ ಮಕ್ಕಳಿಗಾಗಿ ಅರಮನೆ ಆವರಣದಲ್ಲಿರುವ ಟೆಂಟ್ ಶಾಲೆಗೆ ಭೇಟಿ ನೀಡಿದ ಶಿಕ್ಷಣ ಸಚಿವರು, ಎಲ್ಲ ಮಕ್ಕಳೊಂದಿಗೆ ಕೆಲ ಸಮಯ ಕಳೆದರು. ಅಲ್ಲದೆ, ಈ ವೇಳೆ ಮಕ್ಕಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು. ಜತೆಗೆ ಕಾಡಿನ ಕುರಿತ ಹಾಡುಗಳನ್ನು ಮಕ್ಕಳಿಂದ ಹೇಳಿಸಿದ್ದಲ್ಲದೆ, ಅವರ ಜತೆ ನಾಲ್ಕು ಹೆಜ್ಜೆ ಹಾಕಿದರು.
ಸಚಿವರ ಮುಂದೆ ಕನ್ನಡ, ಇಂಗ್ಲಿಷ್ ರೈಮ್ಸ್ ಹಾಡಿ ಮಕ್ಕಳು, ತಮ್ಮದೇ ಶೈಲಿಯಲ್ಲಿ ನೃತ್ಯ ಮಾಡಿ ಸಂಭ್ರಮಿಸಿದರು. ಈ ವೇಳೆ ಸಚಿವರು ಮಕ್ಕಳಿಗೆ ಸಿಹಿ ನೀಡಿದರು. ಬಳಿಕ ಮಾತನಾಡಿದ ಸಚಿವರು, ಚೆನ್ನಾಗಿ ಓದಬೇಕು. ಮೈಸೂರು, ಬೆಂಗಳೂರಿನಲ್ಲಿ ಓದುವಂತಾಗಬೇಕು. ಕಾಡಿನ ಮಕ್ಕಳಿಗೆ ವಿಶೇಷ ಸಾಮರ್ಥ್ಯವಿದೆ. ಪಟ್ಟಣದ ಮಕ್ಕಳಿಗಿಂತ ಹೆಚ್ಚು ಸಾಮರ್ಥ್ಯ ಹೊಂದಿದ್ದಾರೆ. ಸರಿಯಾದ ತರಬೇತಿ, ಶಿಕ್ಷಣ ಸಿಕ್ಕಲ್ಲಿ ಇವರಿಗೆ ಉತ್ತಮ ಭವಿಷ್ಯವಿದೆ ಎಂದು ಅಭಿಪ್ರಾಯಪಟ್ಟರು.
PublicNext
29/09/2022 10:30 pm