ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಬಾಂಬೆ ಸರ್ಕಸ್ ನಜರ್ಬಾದ್ ನ ಕಾರಂಜಿ ಕೆರೆ ಬಳಿಯ ಹಾರ್ಸ್ ಪಾರ್ಕ್ ಮೈದಾನದಲ್ಲಿ ಪ್ರಾರಂಭಗೊಂಡಿದ್ದು, ರಾಜಮಾತೆ ಪ್ರಮೋದಾ ದೇವಿ ಚಾಲನೆ ನೀಡಿದರು.
ಇಥಿಯೋಪಿಯನ್ ಹಾಗೂ ರಷ್ಯನ್ ಕಲಾವಿದರು ಮೈಮನ ರೋಮಾಂಚನಗೊಳಿಸುವ ಸಾಹಸದೊಂದಿಗೆ ಭರಪೂರ ಹಾಸ್ಯವನ್ನೂ ಉಣಬಡಿಸಿದರು. 20ಕ್ಕೂ ಹೆಚ್ಚು ರಿಂಗ್ಸ್ ಹಾಕಿಕೊಂಡು ರಷ್ಯನ್ ರಿಂಗ್ ಡ್ಯಾನ್ಸ್ ಮಾಡಿದ ಯುವತಿಗೆ ಪ್ರೇಕ್ಷಕರಿಂದ ಶಿಳ್ಳೆ- ಚಪ್ಪಾಳೆ ದೊರೆಯಿತು. ಉಲ್ಟಾ ಮಲಗಿಕೊಂಡು ಕಾಲಿನ ಮೇಲೆ ಏಣಿ ಆಕಾರದ ದೊಡ್ಡ ಪೋಲ್ ಇಟ್ಟು ಬಾಸ್ಕೆಟ್ ಬಾಲ್ ಹಾಕುವ ಟವರ್ ಬಾಸ್ಕೆಟ್ ಬಾಲ್ ಎಂಬ ಆಟ ಎಲ್ಲರನ್ನೂ ಆಕರ್ಷಿಸಿತು.
ಚಿಕ್ಕಮಗಳೂರಿನ ವಿನೋದ್ ಮತ್ತು ತಂಡ ವೃತ್ತಾಕಾರದ ಟೇಬಲ್ ಮೇಲೆ ನಿಂತು ಮಾಡಿದ ರೋಲ್ ಸ್ಕೇಟಿಂಗ್ ಗಮನ ಸೆಳೆಯಿತು. ಇಥಿಯೋಪಿಯನ್ ಕಲಾವಿದರ ಕತ್ತಿ ಪ್ರದರ್ಶನ, ರೋಲರ್ ಬ್ಯಾಲೆನ್ಸ್ ಮೈನವಿರೇಳಿಸಿದರೆ, ದಾರದ ಮೇಲೆ ಬುಗರಿ ಪ್ರದರ್ಶನ ಹುಬ್ಬೇರಿಸಿತು.
ಶ್ವಾನಗಳ ರಿವರ್ಸ್ ವಾಕ್, ರಿಂಗ್ ಜಂಪ್ ಮತ್ತು ಗಿಳಿಗಳ ಸೈಕಲ್ ಸವಾರಿ, ಹಗ್ಗದ ಮೇಲಿನ ಸಾಹಸ ಮೆಚ್ಚುಗೆಗೆ ಪಾತ್ರವಾಯಿತು. ಈ ಮಧ್ಯೆ ಜೋಕರ್‌ಗಳ ಕಾಮಿಡಿ ಪ್ರಸಂಗಗಳು ನಗೆಗಡಲಲ್ಲಿ ತೇಲಿಸಿತು.
PublicNext
25/09/2022 07:23 pm