ಮೈಸೂರು: ದಸರಾ ವಸ್ತು ಪ್ರದರ್ಶನದ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಸೆ.26ರಂದು ಸಂಜೆ 4 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಶೇ.80ರಷ್ಟು ಮಳಿಗೆಗಳ ಭರ್ತಿಯಾದ್ದು, ಹಲವು ವಿಶೇಷತೆಗಳು ಇರಲಿವೆ ಎಂದರು.ದಸರಾ ವಸ್ತುಪ್ರದರ್ಶನಕ್ಕೆ ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್ ಚಾಲನೆ ನೀಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. 39 ಸರ್ಕಾರಿ ಮಳಿಗಳಲ್ಲಿ 23 ಮಳಿಗೆಗಳ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ವಿವಿಧ ಕಾರಣಗಳಿಂದಾಗಿ ಉಳಿದ ಮಳಿಗೆಗಳ ನಿರ್ಮಾಣ ಕಾರ್ಯ ತಡವಾಗುತ್ತಿದೆ. ಉಳಿದಂತೆ 143 ವಾಣಿಜ್ಯ ಮಳಿಗೆಗಳು, 30ಕ್ಕೂ ಹೆಚ್ಚು ಆಹಾರ ಮಳಿಗೆಗಳಿರಲಿವೆ. 60ಕ್ಕೂ ಹೆಚ್ಚು ಅಮ್ಯೂಸ್‌ಮೆಂಟ್ ಆಟಗಳು, ವಿವಿಧ ಮನರಂಜನಾ ಚಟುವಟಿಕೆಗಳು ಎಂದಿನಂತೆ ಇರಲಿವೆ. 3ಡಿ ಮ್ಯಾಪಿಂಗ್ ವಿಶೇಷವಾಗಿದ್ದು, ವಸ್ತುಪ್ರದರ್ಶನದ ಪ್ರವೇಶ ದ್ವಾರದ ಮೇಲೆ ರಾಜಮಹಾರಾಜರ ಇತಿಹಾಸವುಳ್ಳ 5ನಿಮಿಷದ ವಿಡಿಯೋ ಪ್ರಸಾರ ಮಾಡಲಾಗುವುದು. ಈ ಮೂಲಕ ರಾಜ್ಯದ ಗತವೈಭವವನ್ನು ತಿಳಿಸಿಸಲಾಗುವುದು ಎಂದರು.
ವಸ್ತುಪ್ರದರ್ಶನ 90 ದಿನಗಳ ಕಾಲ ನಡೆಯಲಿದ್ದು, ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗುವುದು. ಸಾರ್ವಜನಿಕರಿಗೆ 8-10 ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. 8 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಮಾಹಿತಿ ಕೇಂದ್ರ, ಪೊಲೀಸ್ ಠಾಣೆ, ಅಗ್ನಿಶಾಮಕ ವಾಹನ, ಪ್ರಥಮ ಚಿಕಿತ್ಸಾ ಘಟಕ ತೆರೆಯಲಾಗುವುದು ಎಂದು ಹೇಳಿದರು.
PublicNext
25/09/2022 12:42 pm