ಮೈಸೂರು: ಮನೆಯಲ್ಲಿದ್ದ ಒಂಟಿ ಮಹಿಳೆಯ ಕೈ, ಬಾಯಿ ಕಟ್ಟಿ ಚಿನ್ನಾಭರಣ ದೋಚಲಾಗಿದೆ. ನಂಜನಗೂಡು ಪಟ್ಟಣದಲ್ಲಿ ಬೆಳಗ್ಗೆಯೇ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಕಟ್ಟಿ ಹಾಕಿ ಮಾನ- ಪ್ರಾಣದ ಬೆದರಿಕೆಯೊಡ್ಡಿ ಚಿನ್ನ ದೋಚಿಕೊಂಡು ಹೋಗಿದ್ದಾರೆ.
ನಂಜನಗೂಡಿನ ರಾಮಸ್ವಾಮಿ ಲೇಔಟ್ 1ನೇ ಬ್ಲಾಕ್ ನಲ್ಲಿ ಘಟನೆ ನಡೆದಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ಡುಪ್ಲಿಕೇಟ್ ಪಾರ್ಸಲ್ ಬಾಕ್ಸ್ ಹಿಡಿದು ಪಾರ್ಸಲ್ ಬಂದಿದೆ ಎಂದು ಬಾಗಿಲು ತೆಗೆಸಿರುವ ಖದೀಮರು, ಬಾಗಿಲು ತೆಗೆಯುತ್ತಿದ್ದಂತೆ ಒಳ ನುಗ್ಗಿ ಮಹಿಳೆಯನ್ನು ಬೆದರಿಸಿ ಕೈಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಅಂಟಿಸಿದ್ದಾರೆ.
ಮಹಿಳೆಯ ಮೈ ಮೇಲಿದ್ದ ಚಿನ್ನದ ಮಾಂಗಲ್ಯ ಸರ, ಕೈ ಬಳೆ ಉಂಗುರ ಹಾಗೂ ಕೊಠಡಿಯ ಬೀರುವಿನಲ್ಲಿದ್ದ ಮತ್ತೊಂದು ಜೊತೆ ಕೈ ಬಳೆ ನೆಕ್ಲೆಸ್ ಹ್ಯಾಂಗಲ್ಸ್ ತಲೆಬೊಟ್ಟು ಸೇರಿ ಒಟ್ಟು 175 ಗ್ರಾಂ ಗೂ ಹೆಚ್ಚು ಚಿನ್ನದ ಒಡವೆಗಳನ್ನು ದೋಚಿ ಪರಾರಿಯಾಗಿದ್ದಾರೆ. ಪ್ರೌಢಶಾಲಾ ಶಿಕ್ಷಕ ಶಂಭುಸ್ವಾಮಿ ಎಂಬುವವರ ಪತ್ನಿ ದಾಕ್ಷಾಯಿಣಿ ಚಿನ್ನ ಕಳೆದುಕೊಂಡು ಆಘಾತಕ್ಕೆ ಒಳಗಾಗಿರುವ ಮಹಿಳೆ. ಪತಿ ಕೆಲಸಕ್ಕೆ ಹೋದ ಮೇಲೆ ಬೆಳಗ್ಗೆ 8:30ರ ಸಮಯದಲ್ಲಿ ಮಹಿಳೆ ಒಬ್ಬರೇ ಮನೆಯಲ್ಲಿದ್ದ ಸಂದರ್ಭ ಈ ಘಟನೆ ನಡೆದಿದೆ.
ಮೂವರು ಖದೀಮರು ಇದ್ದ ಗುಂಪಿನಲ್ಲಿ ಕನ್ನಡ, ತಮಿಳು, ಹಿಂದಿ ಮಾತನಾಡುತ್ತಿದ್ದರು ಎಂದು ಹೇಳಲಾಗಿದೆ. ಗಲಾಟೆ ಮಾಡಿದರೆ ರೇಪ್ ಹಾಗೂ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು ಎಂದು ಮಹಿಳೆ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ನಂಜನಗೂಡು ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಶಿವಾನಂದ ಶೆಟ್ಟಿ, ಎಎಸ್ ಐ ಚೇತನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಹಾಡಹಗಲೇ ಈ ಕೃತ್ಯ ನಡೆದಿರುವುದು ಇಡೀ ನಂಜನಗೂಡನ್ನೇ ಬೆಚ್ಚಿ ಬೀಳಿಸಿದೆ.
PublicNext
18/09/2022 09:53 am