ನಂಜನಗೂಡು: ಬೈಕ್ ಸವಾರನ ನಿಯಂತ್ರಣ ತಪ್ಪಿ ಬೈಕ್ ಸಮೇತ ಕೆರೆಗೆ ಬಿದ್ದ ಪರಿಣಾಮ ಹಿಂಬದಿಯಲ್ಲಿ ಕುಳಿತ್ತಿದ್ದ ಗರ್ಭಿಣಿ ಮಹಿಳೆ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಕೂಗಲೂರು ಗ್ರಾಮದಲ್ಲಿ ನಡೆದಿದೆ. 22 ವರ್ಷದ ಯಮುನಾ ಮೃತ ಗರ್ಭಿಣಿ ಮಹಿಳೆಯಾಗಿದ್ದಾರೆ. 28 ವರ್ಷದ ದಕ್ಷಿಣಾಮೂರ್ತಿ ಅಲಿಯಾಸ್ ನವೀನ್ ಗಂಭೀರ ಗಾಯಗೊಂಡಿದ್ದಾರೆ. ದೇವನೂರು ಗ್ರಾಮದ ದಕ್ಷಿಣಾಮೂರ್ತಿ ತನ್ನ ಹೆಂಡತಿ ಯಮುನಾ ಜೊತೆ ಬೈಕ್ ನಲ್ಲಿ ನಂಜನಗೂಡು ಮಾರ್ಗವಾಗಿ ಸಿದ್ದಯ್ಯನಹುಂಡಿ ಗ್ರಾಮಕ್ಕೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ.
ಬೈಕ್ ನಲ್ಲಿ ಗಂಡ ಹೆಂಡತಿ ಇಬ್ಬರೂ ಹೋಗುತ್ತಿದ್ದರು. ಬೈಕ್ ಮುಂದೆ ಸಾಮಾನುಗಳನ್ನು ಇಟ್ಟುಕೊಂಡಿದ್ದರು. ಬೈಕ್ ಹ್ಯಾಂಡಲ್ ತಿರುಗಿಸಲು ಆಗದೆ ಕೂಗಲೂರು ಗ್ರಾಮದ ಕೆರೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ವಿಷಯ ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಶಿವನಂಜಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಶೋಧ ಕಾರ್ಯ ನಡೆಸಿ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಮೃತ ಯಮುನಾ ಮೂರು ತಿಂಗಳ ಗರ್ಭಿಣಿಯಾಗಿದ್ದು, ಮೃತಳ ಪತಿ ದಕ್ಷಿಣಾಮೂರ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೂಡಲೇ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದ್ದು, ಮೃತ ಗರ್ಭಿಣಿ ಮಹಿಳೆಯನ್ನು ಮರಣೋತ್ತರ ಪರೀಕ್ಷೆಗೆ ನಂಜನಗೂಡು ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
13/10/2022 10:56 pm