ಮಂಗಳೂರು: ಈ ಬಾರಿ ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ ಕಂಬಳ ಆಯೋಜಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಸ್ತುತ ಸಾಲಿನ ಕಂಬಳ ಕ್ರೀಡೆಯನ್ನು ಜಿಲ್ಲೆಯಲ್ಲಿ ಆಯೋಜಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ನಿಯಮ ಪಾಲಿಸಿ ಜನವರಿ 30ರ ಬಳಿಕ ಜಿಲ್ಲೆಯಲ್ಲಿ 10 ಕಂಬಳಗಳನ್ನು ಏರ್ಪಡಿಸಬಹುದಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ಕೋವಿಡ್ ನ ಈ ದಿನಗಳಲ್ಲಿ ಅತಿ ಹೆಚ್ಚು ಜಾಗ್ರತೆ ವಹಿಸಬೇಕಾಗಿದ್ದು, ಹೆಚ್ಚು ಜನರು ಸೇರದಂತೆ ಕ್ರಮ ವಹಿಸಬೇಕು. ರಾತ್ರಿ ಹತ್ತು ಗಂಟೆಯ ಒಳಗಾಗಿ ಕಂಬಳ ಸ್ಪರ್ಧೆ ಪೂರ್ಣಗೊಳಿಸಬೇಕು. ವಯಸ್ಸಾದವರು ಮತ್ತು ಮಕ್ಕಳು ಭಾಗವಹಿಸದಂತೆ ಎಚ್ಚರ ವಹಿಸಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್ ನಿಯಮ ಪಾಲಿಸಬೇಕು. ಈ ಬಗ್ಗೆ ಕಂಬಳ ಸಮಿತಿಯ ಪದಾಧಿಕಾರಿಗಳು ಜಿಲ್ಲಾಡಳಿತ ವಿಧಿಸುವ ಎಲ್ಲ ನಿಯಮ, ಮಾರ್ಗಸೂಚಿ ಶಿಸ್ತುಬದ್ಧವಾಗಿ ಜರುಗಿಸಲು ಹೆಚ್ಚಿನ ಕಾರ್ಯಕರ್ತರನ್ನು ತೊಡಗಿಸಿಕೊಳ್ಳಬೇಕು ಎಂದರು.
ಶಾಸಕರಾದ ಉಮಾನಾಥ್ ಕೋಟ್ಯಾನ್, ಯು.ಟಿ.ಖಾದರ್, ಪೊಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್, ಉಪ ಪೊಲೀಸ್ ಆಯುಕ್ತ ವಿನಯ್ ಗಾಂವ್ಕರ್, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಟಿ.ಜಿ. ಪ್ರಸನ್ನ ಹಾಗೂ ಕಂಬಳ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
26/01/2021 10:39 pm