ಮುಲ್ಕಿ: ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಮುಲ್ಕಿ ನಗರ ಪಂಚಾಯತ್ ಮತ್ತು ಲೀಡ್ ಬ್ಯಾಂಕ್ ಮಂಗಳೂರು ಸಹಯೋಗದಲ್ಲಿ ದೀನ್ ದಯಾಳ್ ಅಂತ್ಯೋದಯ ಯೋಜನೆ ಡೇ ನಲ್ಮ್ ಅಭಿಯಾನ, ಪ್ರಧಾನ ಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ಯೋಜನೆಯಡಿ ಸ್ವ ನಿಧಿ ಆಜಾಧಿ ಕಾ ಅಮೃತ್ ಮಹೋತ್ಸವ ದ ಸ್ವ ನಿಧಿ - ದಿನ ಶೀರ್ಷಿಕೆ ಅಡಿ ವಿಶೇಷ ಸಾಲ ಮೇಳ ಕಾರ್ಯಕ್ರಮ ಮುಲ್ಕಿ ನಗರ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುಭಾಷ್ ಶೆಟ್ಟಿ ಉದ್ಘಾಟಿಸಿದರು. ಕಾರ್ಯಕ್ರಮದ ಬಗ್ಗೆ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಮಾಹಿತಿ ನೀಡಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದ 351 ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡಿದ್ದು 254 ಮಂದಿ ಪಾವತಿಸಿದ್ದಾರೆ. ಇದೀಗ ಎರಡನೇ ಕಂತಿನಲ್ಲಿ 75 ಮಂದಿಗೆ 20 ಸಾವಿರದ ಸಾಲ ನೀಡಲಾಗುವುದು ಎಂದರು.
ಈ ಸಂದರ್ಭ ನ ಪಂ ಸದಸ್ಯ ಪುತ್ತುಭಾವ ಬ್ಯಾಂಕ್ ಅಧಿಕಾರಿಗಳು ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡಲು ವಿನಾಕಾರಣ ಸತಾಯಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆಗ ನ ಪಂ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಮಧ್ಯಪ್ರವೇಶಿಸಿ ವ್ಯಾಪಾರಿಗಳಿಗೆ ಬ್ಯಾಂಕ್ ಅಧಿಕಾರಿಗಳು ತೊಂದರೆ ನೀಡಿದರೆ ಗಮನಕ್ಕೆ ತನ್ನಿ ಎಂದು ಸಮಾಧಾನಪಡಿಸಿದರು.
ಸಭೆಯಲ್ಲಿ ಪಿಎಂ ಸ್ವ ನಿಧಿ ಯೋಜನೆಯ ಅಧಿಕಾರಿ ವಿಶ್ವನಾಥ ರಾವ್ ಯೋಜನೆ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ನ ಪಂ ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಪುತ್ತುಭಾವ, ಮಂಜುನಾಥ ಕಂಬಾರ್, ನರಸಿಂಹ ಪೂಜಾರಿ, ಸಂತೋಷ್ ದೇಸುಣಿಗಿ, ವೀರಣ್ಣ ಅರಳಗುಂಡಿ, ಆರೋಗ್ಯ ನಿರೀಕ್ಷಕಿ ಲಿಲ್ಲಿ ನಾಯರ್, ವಲಯದ ವಿವಿಧ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಫಲಾನುಭವಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಪತ್ರ ನೀಡಲಾಯಿತು ಭರತಾಂಜಲಿ ಧನ್ಯವಾದ ಅರ್ಪಿಸಿದರು.
Kshetra Samachara
12/08/2022 01:01 pm