ಸುರತ್ಕಲ್: ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಎನ್ಐಟಿಕೆ ಅಕ್ರಮ ಟೋಲ್ ಗೇಟ್ ತೆರವಿಗೆ ಸಂಸದರು, ಸಚಿವರು ನೀಡಿದ ಜೂನ್ 22 ರ ಅಂತಿಮ ಗಡುವು ದಾಟಿ ಮತ್ತೆ ತಿಂಗಳು ಕಳೆದಿದೆ. ಜಿಲ್ಲೆಯಲ್ಲಿ ರಾಜಕೀಯ ಪ್ರೇರಿತ ಮತೀಯ ದ್ವೇಷದ ಕೊಲೆಗಳ ಉನ್ಮಾದದಲ್ಲಿ ಸುರತ್ಕಲ್ ಟೋಲ್ ತೆರವು ಸಹಿತ ಜನ ಸಾಮಾನ್ಯರ ಜ್ವಲಂತ ಸಮಸ್ಯೆಗಳನ್ನು ಮರೆಮಾಚುವ ಯತ್ನ ನಡೆಯುತ್ತಿದೆ.
ಜನಪ್ರತಿನಿಧಿಗಳ ಇಂತಹ ರಾಜಕಾರಣವನ್ನು ಒಪ್ಪಲು ಸಾಧ್ಯವಿಲ್ಲ. ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯ ಮೊದಲು ಸುರತ್ಕಲ್ ಅಕ್ರಮ ಟೋಲ್ ತೆರವುಗೊಳಿಸಿ ಜನತೆಯನ್ನು ಟೋಲ್ ಲೂಟಿಯಿಂದ ಬಿಡುಗಡೆಗೊಳಿಸಬೇಕು ಎಂದು "ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್" ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರನ್ನು ಆಗ್ರಹಿಸಿದೆ.
ಸರಕಾರ ನಡೆಸುವವರ ಇಂತಹ ಹುನ್ನಾರಗಳಿಗೆ ಬಲಿ ಬೀಳುವ ಪ್ರಶ್ನೆಯೆ ಇಲ್ಲ ಎಂದು ಹೇಳಿರುವ "ಟೋಲ್ ಗೇಟ್ ವಿರೋಧಿ ಹೋರಾಟಸಮಿತಿ" ನಿಷೇಧಾಜ್ಞೆ ಹಿನ್ನಲೆಯಲ್ಲಿ ಹೋರಾಟಗಳು ತಾತ್ಕಾಲಿಕವಾಗಿಯಷ್ಟೆ ಮುಂದೂಡಲ್ಪಟ್ಟಿದೆ.
ಮತೀಯವಾದಿ ಕೊಲೆಗಡುಕ ರಾಜಕಾರಣದಿಂದ ಜನರನ್ನು ಹೆಚ್ಚು ಕಾಲ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ, ಬೆಳ್ಳಾರೆಯಲ್ಲಿ ವ್ಯಕ್ತವಾಗಿರುವ ಆಕ್ರೋಶ ಜನಸಾಮಾನ್ಯರಲ್ಲಿ ಆಡಳಿತ ನಡೆಸುವವರ ನೀತಿಗಳ ವಿರುದ್ದ ಮಡುಗಟ್ಟಿರುವ ಅತೃಪ್ತಿಯ ಒಂದು ಸಣ್ಣ ಸೂಚನೆ. ಜನತೆಯನ್ನು ಭಾದಿಸುವ ಟೋಲ್ ಗೇಟ್, ನಿರುದ್ಯೋಗ ಸಹಿತ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಈ ಆಕ್ರೋಶ ಜನಪ್ರತಿನಿಧಿಗಳ ವಿರುದ್ದ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರವಾಗಿ ಸ್ಫೋಟಗೊಳ್ಳಲಿದೆ.
ಆಗಸ್ಟ್ ಹದಿನೈದು ಸ್ವಾತಂತ್ರ್ಯ ದಿನಾಚರಣೆಯ ಮುನ್ನವೇ ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುಚ್ಚುವ ನಿರ್ಧಾರವನ್ನು ಜಾರಿಗೊಳಿಸಬೇಕು, ಆ ಮೂಲಕ ಟೋಲ್ ಲೂಟಿಯಿಂದ ಜನತೆಗೆ ಸ್ವಾತಂತ್ರ್ಯವನ್ನು ಕೊಡಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಘೆರಾವ್, ಸುಂಕ ಸಂಗ್ರಹಕ್ಕೆ ತಡೆ, ಟೋಲ್ ಗೇಟ್ ಮುಂಭಾಗ ಸಾವಿರಾರು ಜನರ ಸಾಮೂಹಿಕ ಧರಣಿಯಂತಹ ತೀವ್ರತರದ ಹೋರಾಟಗಳು ನಡೆಯಲಿವೆ ಎಂದು ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಮಾಧ್ಯಮದ ಮೂಲಕ ಸರಕಾರವನ್ನು ಎಚ್ಚರಿಸಿದ್ದಾರೆ.
Kshetra Samachara
06/08/2022 02:11 pm