ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕೆಎಸ್ ರಾವ್ ನಗರದ ಕೊರಂಟಬೆಟ್ಟು ಬಳಿ ಮಲಿನ ನೀರು ಶುದ್ಧೀಕರಣ ನಡೆಸಲು ಕಾಂಕ್ರೀಟ್ ಚರಂಡಿಯನ್ನು ಅಗೆದು ಹಾಕಿದ್ದು ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ.
ಅರ್ಧಂಬರ್ಧ ಕಾಮಗಾರಿ ನಡೆಸಿದ್ದರಿಂದ ತೆರೆದ ಚರಂಡಿಯಿಂದ ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದ್ದು ರೋಗಗಳ ಭೀತಿ ಎದುರಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಶಶಿಕಲಾ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಿಂಗಪ್ಪಯ್ಯಕಾಡು ಪ್ರದೇಶ ವ್ಯಾಪ್ತಿಯ ತ್ಯಾಜ್ಯ ನೀರು ಇದೇ ಚರಂಡಿಯಲ್ಲಿ ಹರಿಯುತ್ತಿದ್ದು , ಕಸಕಡ್ಡಿಗಳು ತುಂಬಿಕೊಂಡಿರುವುದರಿಂದ ನೀರನ್ನು ಶುದ್ಧೀಕರಣಗೊಳಿಸುವ ಪ್ರಕ್ರಿಯೆಗೆ ನಗರ ಪಂಚಾಯತ್ ಮೂಲಕ ಚಾಲನೆ ನೀಡಲಾಗಿತ್ತು.
ಆದರೆ ಸ್ಥಳೀಯರಾದ ಕೆಲವರು ಕಾಮಗಾರಿಗೆ ಅಡ್ಡಿಪಡಿಸಿದ್ದರಿಂದ ಗುತ್ತಿಗೆದಾರರು ಕಾಮಗಾರಿಯನ್ನು ಏಕಾಏಕಿ ಸ್ಥಗಿತಗೊಳಿಸಿದ್ದಾರೆ.ಎನ್ನಲಾಗಿದೆ.
ಅರ್ಧಂಬರ್ಧ ಕಾಮಗಾರಿಯಿಂದ ತೆರೆದ ಚರಂಡಿ ಅಪಾಯಕಾರಿಯಾಗಿ ಪರಿಣಮಿಸಿದೆ. ಅಲ್ಲದೆ ಈ ಪರಿಸರದಲ್ಲಿ ಮಕ್ಕಳು ಕೂಡ ಆಟವಾಡುತ್ತಿದ್ದು ಚರಂಡಿ ಬಳಿ ಕಾಂಕ್ರೀಟ ಸ್ಲಾಬ್ ತಾಗಿ ಕೆಲ ಮಕ್ಕಳಿಗೆ ಗಾಯಗಳಾಗಿವೆ.
ಕೂಡಲೇ ಮುಖ್ಯಾಧಿಕಾರಿಗಳು ಯಾರ ಬೆದರಿಕೆಗೂ ಮಣಿಯದೆ ಕಾಮಗಾರಿಯನ್ನು ಪೂರ್ತಿ ಗೊಳಿಸಬೇಕು ಎಂದು ಶಶಿಕಲಾ ಒತ್ತಾಯಿಸಿದ್ದಾರೆ.
Kshetra Samachara
10/06/2022 04:20 pm