ಮಂಗಳೂರು:ಮುಲ್ಕಿ ತಾಲೂಕು ಬಳ್ಕುಂಜೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಭೂಸ್ವಾಧೀನತೆಗೆ ಸಂಬಂಧಿಸಿದಂತೆ ನಾಗರಿಕರು ವಿರೋಧ ವ್ಯಕ್ತಪಡಿಸಿ ಬಳ್ಕುಂಜೆ ಚರ್ಚ್ ಸಭಾಂಗಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದಿದ್ದು ಸ್ಪಷ್ಟೀಕರಣ ನೀಡಲಾಗಿದೆ.
ಮುಲ್ಕಿ ತಾಲೂಕು ಬಳ್ಕುಂಜೆ ಮತ್ತು ಸುತ್ತಮುತ್ತಲಿನ ಪುದೇಶಗಳಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಭೂಸ್ವಾಧೀನವಾಗಲಿದೆ ಎಂಬ ಬಗ್ಗೆ ಒಂದು ವರ್ಷದ ಹಿಂದೆ ಅಂದು ಕೈಗಾರಿಕಾ ಸಚಿವರಾಗಿದ್ದ ಜಗದೀಶ್ ಶೆಟ್ಟರ್ ಅವರು ಹೇಳಿಕೆ ನೀಡಿರುವುದು ಮಾಧ್ಯಮದಲ್ಲಿಪ್ರಕಟವಾಗಿತ್ತು.
ಬಳಿಕ ಇಂದಿನ ಕೈಗಾರಿಕಾ ಸಚಿವರು ಕೂಡ ಬಳ್ಕುಂಜೆ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಜಮೀನನ್ನು ಭೂಸ್ವಾಧೀನಪಡಿಸುವ ಸಂಬಂಧ ನೀಡಿರುವ ಮಾಹಿತಿ ಕೂಡ ಮಾಧ್ಯಮದಲ್ಲಿ ಪ್ರಕಟಗೊಂಡಿರುತ್ತದೆ.
ಬಳ್ಕುಂಜೆ, ಕೊಲ್ಲೂರು ಮತ್ತು ಉಳೆಪಾಡಿ ಗ್ರಾಮಗಳಲ್ಲಿ 1091.57 ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶಕ್ಕಾಗಿ ಭೂಸ್ವಾಧೀನಪಡಿಸುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966 ರ ಕಲಂ 28(1) ರಡಿ ಪ್ರಾಥಮಿಕ ಅಧಿಸೂಚನೆಯನ್ನಷ್ಟೇ ಹೊರಡಿಸಿರುವುದಾಗಿದೆ.
ಈ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಎಲ್ಲಾ ಭೂಮಾಲೀಕರಿಗೂ ಈ ಕಾಯ್ದೆಯ ಕಲಂ 28(2) ರಡಿ ವೈಯಕ್ತಿಕ ನೋಟೀಸನ್ನು ಜಾರಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಕಲಂ 28 (2) ರ ನೋಟೀಸಿನಲ್ಲಿ ಪ್ರತಿಯೊಬ್ಬ ಭೂಮಾಲೀಕರಿಗೂ ಕಲಂ 28(3) ರ ವಿಚಾರಣೆಗೆ ಹಾಜರಾಗುವ ದಿನಾಂಕ ಮತ್ತು ಸಮಯವನ್ನು ತಿಳಿಸಲಾಗುತ್ತಿದೆ.
ವಿಚಾರಣೆ ದಿನಾಂಕದಂದು ಪ್ರತಿಯೊಬ್ಬ ಭೂಮಾಲೀಕರಿಗೂ ಅವರವರ ಅಹವಾಲನ್ನು ಮಂಡಿಸಲು ವಿಚಾರಣೆ ಸಮಯದಲ್ಲಿ ಅವಕಾಶ ಕಲ್ಪಿಸಲಾಗುವುದು, ಅಲ್ಲದೇ ಪ್ರಾಥಮಿಕ ಅಧಿಸೂಚನೆಯಲ್ಲಿ ಧಾರ್ಮಿಕ ಸಂಸ್ಥೆಗಳಿರುವ ಜಮೀನುಗಳು ಮತ್ತು ಗುಂಪು ಮನೆಗಳು ಒಳಗೊಂಡಿದ್ದಲ್ಲಿ ಕಲಂ 28(3) ರಲ್ಲಿ ವಿಚಾರಣೆ ನಡೆಸಿ ಆದೇಶ ಹೊರಡಿಸುವಾಗ ಈ ಅಧಿಸೂಚನೆಯಲ್ಲಿ ಧಾರ್ಮಿಕ ಸಂಸ್ಥೆಗಳು ಮತ್ತು ಗುಂಪು ಮನೆಗಳನ್ನು ಒಳಗೊಂಡಿರುವ ಜಮೀನುಗಳನ್ನು, ಭೂಸ್ವಾಧೀನತೆಯಿಂದ ಕೈಬಿಡುವ ಕ್ರಮ ಕೈಗೊಳ್ಳಲಾಗುವುದು.
ಈ ಭೂಸ್ವಾಧೀನತೆಗೆ ಸಂಬಂಧಿಸಿದಂತೆ ಜಿ.ಎಂ.ಸಿ ಕಾರ್ಯವನ್ನು ತೋಟಗಾರಿಕೆ, ಅರಣ್ಯ ಮತ್ತು ಇಂಜಿನಿಯರಿಂಗ್ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜರಗಿಸಲು ಕ್ರಮ ಕೈಗೊಳ್ಳಲಾಗಿದೆ. ನಂತರ 28(4) ರಡಿ ಅಂತಿಮ ಅಧಿಸೂಚನೆ ಹೊರಡಿಸುವಾಗ ಕಲಂ 28(1) ರ ಪ್ರಾಥಮಿಕ ಅಧಿಸೂಚನೆಯಲ್ಲಿ ಒಳಗೊಂಡ ಜಮೀನುಗಳ ಪೈಕಿ ಅಂತಿಮವಾಗಿ ಭೂಸ್ವಾಧೀನವಾಗಲಿರುವ ವಿಸ್ತೀರ್ಣದ ಬಗ್ಗೆ, ಮಾತ್ರ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು.
ಕಲಂ 28(4) ರಡಿ ಅಂತಿಮ ಅಧಿಸೂಚನೆಯಾದ ನಂತರ ಕಲಂ 29(2) ರಡಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯ ಭೂದರ ಸಲಹಾ ಸಮಿತಿಯ ಮೂಲಕ ಭೂದರವನ್ನು ನಿಗದಿಪಡಿಸಲು ಕ್ರಮ ಜರಗಿಸಲಾಗುವುದು. ಈ ಭೂದರವು ಮಂಡಳಿಯಿಂದ ಅನುಮೋದನೆಗೊಂಡ ನಂತರ ನಿಗದಿಪಡಿಸಿದ ದರದಲ್ಲಿ ಭೂಮಾಲೀಕರಿಗೆ ಪರಿಹಾರ ಧನ ವಾವತಿಸಲು ಕ್ರಮ ಕೈಗೊಳ್ಳಲಾಗುವುದು. ಪರಿಹಾರ ಧನ ನಿಗದಿಪಡಿಸುವಾಗ 2013 ರ ಹೊಸ ಭೂಸ್ವಾಧೀನ ಕಾಯ್ದೆಯನ್ನಯ ಭೂದರ ನಿಗದಿಪಡಿಸಲಾಗುವುದು.
ಅಲ್ಲದೆ ಜಮೀನಿನಲ್ಲಿರುವ ಮರ - ಮಾಲ್ಕಿಗಳಿಗೆ ಮತ್ತು ಕೃತಾವಳಿಗಳಿಗೆ ಸಂಬಂಧಪಟ್ಟ ಇಲಾಖೆಯವರು ನಿಗದಿಪಡಿಸಿದ ಪರಿಹಾರ ಮೊತ್ತವನ್ನು ಪಾವತಿಸಲಾಗುವುದು ಹಾಗೂ ತದ ನಂತರ ಜಮೀನನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿ ಜೂ.7ರ ಮಂಗಳವಾರ ಸಂಜೆ ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಿಳಿಸಿದ್ದಾರೆ.
Kshetra Samachara
07/06/2022 09:10 pm