ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ ಅಭಿವೃದ್ಧಿ ಬಗ್ಗೆ ಜನಪ್ರತಿನಿಧಿಗಳ ಮಲತಾಯಿ ಧೋರಣೆ: ನ.ಪಂ.ಸಭೆಯಲ್ಲಿ ಆಕ್ರೋಶ

ಮುಲ್ಕಿ: ಮುಲ್ಕಿ ನಗರ ಪಂಚಾಯತ್ ಮಾಸಿಕ ಸಭೆ ಅಧ್ಯಕ್ಷ ಸುಭಾಷ್ ಶೆಟ್ಟಿ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಮುಲ್ಕಿ-ಮೂಡುಬಿದ್ರೆ ಅವಳಿ ನಗರಗಳ ಪೈಕಿ ಜನಪ್ರತಿನಿಧಿಗಳು ಮುಲ್ಕಿಯನ್ನು ಕಡೆಗಣಿಸುತ್ತಿದ್ದು, ಎಲ್ಲಾ ಅನುದಾನಗಳನ್ನು ಮೂಡುಬಿದಿರೆಗೆ ಒದಗಿಸುತ್ತಿರುವ ಬಗ್ಗೆ ಸಭೆಯಲ್ಲಿ ಅನೇಕ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಈ ಬಾರಿಯ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಮುಲ್ಕಿ ನಪಂ ಅಧ್ಯಕ್ಷರ ಹೆಸರು ಬಿಟ್ಟ ಬಗ್ಗೆ ಸದಸ್ಯ ಪುತ್ತುಬಾವ ಆಕ್ಷೇಪ ವ್ಯಕ್ತಪಡಿಸಿದರು.

ನಗರಪಾಲಿಕೆಯಿಂದ ಮುಲ್ಕಿ ನಗರಕ್ಕೆ ಪೂರೈಕೆಯಾಗುತ್ತಿರುವ ಕುಡಿಯುವ ನೀರಿನ ಕೊಳವೆಗೆ ಅಳವಡಿಸಿದ ಗೇಟ್ವಾಲ್ ಬೀಗವನ್ನು ಹಳೆಯಂಗಡಿ ಬಳಿ ಮುರಿದ ಬಗ್ಗೆ ಮೂಲ್ಕಿ ನಪಂ ವತಿಯಿಂದ ಹಳೆಯಂಗಡಿ ಗ್ರಾಪಂ ವಿರುದ್ಧ ಪೋಲಿಸರಿಗೆ ದೂರು ನೀಡಲಾಗಿದೆ. ಎಂದು ಸಭೆಯಲ್ಲಿ ಅಧ್ಯಕ್ಷ ಸುಭಾಶ್ ಶೆಟ್ಟಿ ತಿಳಿಸಿದರು.

ನಗರಾಡಳಿತದಿಂದ ಹಳೆಯಂಗಡಿಗೆ ನೀರು ಪೂರೈಸುತ್ತಿದ್ದರೂ, ಅನಧಿಕೃತವಾಗಿ ಬೀಗ ಮುರಿಯಲಾಗಿತ್ತು. ಹಾಗಾಗಿ ದೂರು ನೀಡಲಾಗಿದೆ ಎಂದು ಮುಖ್ಯಾಧಿಕಾರಿ ಪಿ.ಚಂದ್ರ ಪೂಜಾರಿ ತಿಳಿಸಿದರು. ನ.ಪಂ ವ್ಯಾಪ್ತಿಯ ವಿಜಯ ರೈತ ಸಂಘದ ಬಳಿ ಅನಧಿಕೃತವಾಗಿ ವಾಹನಗಳು ಪಾರ್ಕಿಂಗ್ ಮಾಡುತ್ತಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತದೆ ಎಂದು ಸದಸ್ಯ ನರಸಿಂಹ ಪೂಜಾರಿ ತಿಳಿಸಿ ಸೂಕ್ತ ಕ್ರಮಕ್ಕೆ ವಿನಂತಿಸಿದರು.

ಕೊಳಚಿಕಂಬಳ ಬಳಿ ನಿರ್ಮಾಣವಾಗುತ್ತಿರುವ ಜಿಪಂ ಅನುದಾನದ ಕೆರೆ ತಡೆಗೋಡೆ ಕಾಂಕ್ರೀಟ್ ಕಾಮಗಾರಿಗೆ ಉಪ್ಪು ನೀರು ಬಳಸುತ್ತಿರುವ ಬಗ್ಗೆ ಸದಸ್ಯ ಯೋಗೀಶ್ ಕೋಟ್ಯಾನ್ ತಿಳಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು. ನಗರ ವ್ಯಾಪ್ತಿಯ ಕೆಎಸ್ ರಾವ್ ನಗರದಲ್ಲಿ 3 ಡೆಂಗೆ ಪ್ರಕರಣಗಳು ವರದಿಯಾಗಿರುವುದಾಗಿ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ತಿಳಿಸಿ ಕೋವಿಡ್ 4ನೇ ಅಲೆಯ ಬಗ್ಗೆ ಮಾಹಿತಿ ನೀಡಿ ಎಚ್ಚರ ವಹಿಸುವಂತೆ ವಿನಂತಿಸಿದರು.

ಮೆಸ್ಕಾಂ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮಾಹಿತಿಗಾಗಿ ದೂರವಾಣಿ ಮಾಡಿದರೆ ಸ್ಪಂದಿಸುತ್ತಿಲ್ಲ ಎಂದು ಸದಸ್ಯರನೇಕರು ಪ್ರಶ್ನಿಸಿದರು. ಈ ಬಗ್ಗೆ ಸೂಕ್ತ ಕ್ರಮದ ಭರವಸೆ ದೊರೆಯಿತು. ಅರಣ್ಯ ಇಲಾಖೆಯವರು ಬೆಲೆಬಾಳುವ ಮರಗಳನ್ನು ಕಡಿದು ಕೊಂಡೊಯ್ಯುತ್ತಾರೆ. ಆದರೆ ಉಪಯೋಗ ರಹಿತ ಮರಗಳನ್ನು ಕಡಿಯುವುದಿಲ್ಲ ಎಂದು ಸದಸ್ಯರು ಆಕ್ಷೇಪಿಸಿದರು. ನಗರ ವ್ಯಾಪ್ತಿಯ ಹೆದ್ದಾರಿಯಲ್ಲಿ ಅಳವಡಿಸಲಾದ ಹೊಸ ಬ್ಯಾರಿಕೇಡ್ ನಿಂದ ರಸ್ತೆ ಗಮನಿಸಲು ಅಸಾಧ್ಯವಾಗಿದ್ದು, ಸೂಕ್ತ ಕ್ರಮಕ್ಕೆ ಬಾಲಚಂದ್ರ ಕಾಮತ್ ಒತ್ತಾಯಿಸಿದರು.

ಹಲವು ಸಮಯದಿಂದ ವಾರ್ಡ್ ಸಮಸ್ಯೆಗಳ ಬಗ್ಗೆ ದೂರು ನೀಡಿದರೂ ಯಾವುದೇ ಸ್ಪಂದನೆ ಇಲ್ಲ ಎಂದು ಸದಸ್ಯ ಮಂಜುನಾಥ ಕಂಬಾರ್ ದೂರಿದರು. ಎಸ್ಸಿ, ಎಸ್ಟಿ ನಿಧಿಯಿಂದ ಮನೆ ನಿರ್ಮಾಣ, ಮನೆ ರಿಪೇರಿಗೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸುವಂತೆ ಮತ್ತು ತಾಳಿ ಭಾಗ್ಯ ಯೋಜನೆ ಮರು ಜಾರಿಗೊಳಸುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಲು ಸಭೆ ನಿರ್ಧರಿಸಿತು.

Edited By : PublicNext Desk
Kshetra Samachara

Kshetra Samachara

30/04/2022 06:30 pm

Cinque Terre

1.48 K

Cinque Terre

0

ಸಂಬಂಧಿತ ಸುದ್ದಿ