ಮೂಡುಬಿದಿರೆ : ಸಮರ್ಪಕ ಕಸ ವಿಲೇವಾರಿಯಿಂದ ಮಾತ್ರ ಸ್ವಚ್ಛತೆಯನ್ನು ಕಾಪಾಡಲು ಸಾಧ್ಯವಿಲ್ಲ. ಕಾರ್ಖಾನೆ ಮತ್ತು ವಸತಿ ಸಮುಚ್ಛಯಗಳ ಮಲೀನ ನೀರನ್ನು ನದಿ ಮತ್ತಿತರ ನೀರಿನ ಮೂಲಗಳಿಗೆ ಹರಿಯಬಿಡುವುದರಿಂದ ಈ ನೀರು ಕಲುಷಿತಗೊಳ್ಳುತ್ತಿದೆ. ಇಂತಹ ನೀರನ್ನೇ ಕುಡಿಯುವುದರಿಂದ ಬಹಳಷ್ಟು ಮಾರಕ ರೋಗಗಳು ನಮ್ಮನ್ನು ಭಾದಿಸುತ್ತವೆ. ಹೀಗಾಗಿ ವಸತಿ ಸಮುಚ್ಛಯಗಳ ನಿರ್ಮಾಣದ ಸಂದರ್ಭದಲ್ಲಿ ನೀರಿನ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಮೂಡುಬಿದಿರೆ ಪುರಸಭೆ ವತಿಯಿಂದ ಶುಕ್ರವಾರ ಕನ್ನಡ ಭವನದಲ್ಲಿ ಸ್ವಚ್ಛ ಸರ್ವೇಕ್ಷಣೆಯ ಅಂಗವಾಗಿ ನಡೆಸಿದ ವಿವಿಧ ಸ್ಪರ್ದೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮತ್ತು ಸ್ವಚ್ಛತೆಗಾಗಿ ದುಡಿದವರು ಮತ್ತು ಸಂಘ-ಸಂಸ್ಥೆಗಳ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕೈ ಮತ್ತು ಮನಸ್ಸು ಸ್ವಚ್ಛವಾಗಿರಬೇಕು ಆಗ ಹಲವು ಸಮಸ್ಯೆಗಳು ಪರಿಹಾರವಾಗುತ್ತದೆ. ಕಸವಿಲೇವಾರಿಯ ಜವಾಬ್ದಾರಿಯು ಕೇವಲ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗದೆ ಪ್ರತಿಯೊಬ್ಬರು ಇದನ್ನು ತಮ್ಮ ಕರ್ತವ್ಯವೆಂದು ಅರಿತುಕೊಳ್ಳಬೇಕು. ಬೆಳೆಯುತ್ತಿರುವ ನಗರ ಮೂಡುಬಿದಿರೆ ಈ ಪರಿಸರವು ಸ್ವಚ್ಛತೆಯಲ್ಲಿ ರಾಷ್ಟ್ರಕ್ಕೆ ಮಾದರಿಯಾಗುವಂತೆ ಆಗಬೇಕಾಗಿದೆ ಆದ್ದರಿಂದ ನಮ್ಮ ಪರಿಸರವನ್ನು ನಾವೇ ಸ್ವಚ್ಛವಾಗಿಡಬೇಕು ಎಂದರು.
Kshetra Samachara
30/04/2022 03:42 pm