ಮೂಡುಬಿದಿರೆ : ಭಾರತೀಯತೆಯ ಜೊತೆ ಶುದ್ಧ ಮಾನವೀಯ ಸಂವೇದನೆಯನ್ನು ತುಂಬುವಂತಹ ಕಾರ್ಯ ಸಾಹಿತ್ಯ ಲೋಕದಲ್ಲಿ ಆಗಬೇಕಾಗಿದೆ. ನಮ್ಮ ಮಾತೃ ಭಾಷೆಯ ಬಗ್ಗೆ ನಾವು ಅಭಿಮಾನ ಬೆಳೆಸಿಕೊಳ್ಳುವುದರ ಜೊತೆಗೆ ಅನ್ಯ ಭಾಷೆಗಳ ಬಗ್ಗೆಯೂ ಅನಾದರ, ಅಗೌರವ ತೋರಿಸದೆ ಅವುಗಳನ್ನೂ ಸಮಾನವಾಗಿ ಆದರಿಸುವ ಗುಣವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂಬುದಾಗಿ ಹಿರಿಯ ಸಾಹಿತಿ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮೂಡುಬಿದಿರೆ ತಾಲೂಕಿನ ಅಧ್ಯಕ್ಷ ಸದಾನಂದ ನಾರಾವಿ ಹೇಳಿದರು.
ಅವರು ಪ್ರೆಸ್ ಕ್ಲಬ್(ರಿ) ಮೂಡುಬಿದಿರೆ, ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಿಗೋಳಿ(ರಿ) ಹಾಗೂ ಅ.ಭಾ.ಸಾ.ಪ ಮೂಡುಬಿದಿರೆ ತಾಲೂಕು ಇವುಗಳ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆದ ಡಾ.ಜಗನ್ನಾಥ ಶೆಟ್ಟಿಯವರ 'ಕರ್ನಾಟಕ ಧ್ರುವತಾರೆ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಏರ್ಪಡಿಸಲಾದ ಮೂಡುಬಿದಿರೆ ತಾಲೂಕು ಮಟ್ಟದ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಭಾಷೆಯಿಂದ ಅಭಿವ್ಯಕ್ತಿಗೊಳ್ಳುವ ಎಲ್ಲ ರೂಪಗಳು ಕೂಡಾ ಸಾಹಿತ್ಯವೇ ಆಗಿರುವುದರಿಂದ ಎಲ್ಲ ಭಾರತೀಯ ಭಾಷೆಗಳೂ ಉಳಿದು ಬೆಳೆಯಬೇಕು, ಅವುಗಳಲ್ಲಿ ಸಾಹಿತ್ಯ ಸೃಷ್ಟಿಯಾಗಿ ಸಾಹಿತ್ಯ ಲೋಕ ಶ್ರೀಮಂತಗೊಳ್ಳಬೇಕೆಂಬುದೇ ಅ.ಭಾ.ಸಾ.ಪ.ದ ಪ್ರಮುಖ ಉದ್ದೇಶವಾಗಿದೆ ಎಂದರು.
ಕವಿಗೋಷ್ಠಿಯಲ್ಲಿ ಉಗ್ಗಪ್ಪ ಪೂಜಾರಿ ಮತ್ತು ನಾಗಶ್ರೀ ಎಸ್.ಭಂಡಾರಿ (ತುಳು) ಪದ್ಮನಾಭ ಮಿಜಾರು, ಮಾನಸ ಪ್ರವೀಣ್ ಭಟ್ ಮತ್ತು ಶರಣ್ಯ ಬೆಳುವಾಯಿ (ಕನ್ನಡ) ಪಿ.ಎಂ ಹಸನಬ್ಬ (ಬ್ಯಾರಿ) ಪೀಟರ್ ಡಿಸೋಜಾ ತಾಕೊಡೆ ಮತ್ತು ಸುಮಂಗಲಾ ಕಿಣಿ (ಕೊಂಕಣಿ) ಕವಿತೆಗಳನ್ನು ಪ್ರಸ್ತುತಪಡಿಸಿದರು.
ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷರು ಹಾಗೂ ಕೃತಿಕಾರರೂ ಆಗಿರುವ ಡಾ. ಜಗನ್ನಾಥ ಶೆಟ್ಟಿ ಹಾಗೂ ಶ್ರೀಮತಿ ಸುಚೇತಾ ಜೆ. ಶೆಟ್ಟಿಯವರು ಕವಿಗಳನ್ನು ಪ್ರಶಸ್ತಿ ಪತ್ರ, ಸ್ಮರಣಿಕೆಗಳೊಂದಿಗೆ ಗೌರವಿಸಿದರು. ಅ.ಭಾ.ಸಾ.ಪ.ದ ಕಾರ್ಯದರ್ಶಿ ರಾಮಕೃಷ್ಣ ಶಿರೂರು ಕಾರ್ಯಕ್ರಮ ನಿರೂಪಿಸಿದರು. ಧನಂಜಯ ಮೂಡುಬಿದಿರೆ ಸ್ವಾಗತಿಸಿ ವಂದಿಸಿದರು.
Kshetra Samachara
20/04/2022 11:23 am