ಮೂಡುಬಿದಿರೆ: ಜೈನಧರ್ಮದ ತೀರ್ಥಂಕರರು ಸಾರಿದ ಸಂದೇಶಗಳು ಎಲ್ಲರಿಗೂ ಹಿತ ನೀಡುವ ಸಾರ್ವಕಾಲಿಕ ಸತ್ಯದರ್ಶನವಾಗಿದೆ. ಜೈನಧರ್ಮದ ಬಸದಿಗಳು ಶ್ರೇಷ್ಠ ಆಧ್ಯಾತ್ಮಿಕ ಅನುಭವ ನೀಡುತ್ತಿದೆ.
ಇಲ್ಲಿನ ಸಾವಿರ ಕಂಬದ ಬಸದಿಯು ಶಿಲ್ಪಕಲೆಯ ಮೆರುಗಿನೊಂದಿಗೆ ಅದ್ಭುತ ಅನುಭವ ನೀಡುತ್ತದೆ ಎಂದು ಗೋವಾ ಪೋಂಡಾದ ಕೊಂಡಾಲಮ್‌ನ ಶ್ರೀ ದತ್ತಪದ್ಮನಾಭ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮೇಶಾನಂದ ಆಚಾರ್ಯ ಸ್ವಾಮೀಜಿ ಹೇಳಿದರು. ಇಲ್ಲಿನ ಸಾವಿರ ಕಂಬದ ಬಸದಿಯ ರಥೋತ್ಸವದಂಗವಾಗಿ ನಡೆದ ಶ್ರಮಣ ಸಂಸ್ಕೃತಿ ಸಮ್ಮೇಳನವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಆಶೀರ್ವಚನ ಮತ್ತು ಅಧ್ಯಕ್ಷತೆ ವಹಿಸಿ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ ಪೂರ್ವಜರು ನಿರ್ಮಿಸಿದ ಬಸದಿ ಮಂದಿರಗಳನ್ನು ಸುಸ್ಥಿತಿಯಲ್ಲಿಟ್ಟು ಮುಂದಿನ ತಲೆಮಾರಿಗೆ ಬಿಟ್ಟುಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಬಸದಿಗಳ ನಿರ್ವಹಣೆಗೆ ಸಮುದಾಯದ ಜನರ ಕೊಡುಗೆ ಅಗತ್ಯ ಎಂದರು. ನಿವೃತ್ತ ಪ್ರಾಚಾರ್ಯ ಗುಣಪಾಲ ಕಡಂಬ ಮಾತನಾಡಿ ಸಾವಿರ ಕಂಬದ ಬಸದಿಯ ಪರಿಸರದಲ್ಲಿ ಮಹಾಕವಿ ರತ್ನಾಕರವರ್ಣಿ ಕಾವ್ಯ ಸಂಪದವನ್ನು ಶಿಲಾಫಲಕದಲ್ಲಿ ಸುರಕ್ಷಿತವಾಗಿ ಅಳವಡಿಸುವ ಮೂಲಕ ಕವಿಕಾವ್ಯವನ್ನು ಆಸಕ್ತರಿಗೆ ಪರಿಚಯಿಸುವ ಕೆಲಸವಾಗಬೇಕಾಗಿದೆ ಎಂದರು.
ನಿವೃತ್ತ ಅಧ್ಯಾಪಕ ಮುನಿರಾಜ ರೆಂಜಾಳ ಶ್ರಮಣ ಸಂಸ್ಕೃತಿಯ ಮಹತ್ವದ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮೊಕ್ತೇಸರರಾದ ಪಟ್ಣಶೆಟ್ಟಿ ಸುದೇಶ್ ಕುಮಾರ್, ಆನಡ್ಕ ದಿನೇಶ್ ಕುಮಾರ್, ಆದರ್ಶ ಅರಮನೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮೂಡುಬಿದಿರೆ ವಕೀಲರ ಸಂಘದ ನೂತನ ಅಧ್ಯಕ್ಷ ದಿವಿಜೇಂದ್ರ ಕುಮಾರ್, ಕಲಾವಿದೆ ವಿದ್ಯಾ ರಘುವೀರ ಮುದ್ರೆ ಮತ್ತು ಸೇವಾದಾರರನ್ನು ಸನ್ಮಾನಿಸಲಾಯಿತು.ಶ್ವೇತಾ ಜೈನ್ ಕಾರ್ಯಕ್ರಮ ನಿರ್ವಹಿಸಿದರು.
Kshetra Samachara
19/04/2022 12:11 pm