ಮುಲ್ಕಿ: ಕಿನ್ನಿಗೋಳಿ ಸಮೀಪದ ಕೆಮ್ರಾಲ್ ಗ್ರಾಮ ಪಂಚಾಯತ್ ನ 2021- 22 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಗ್ರಾಪಂ ಸಭಾಭವನದಲ್ಲಿ ಅಧ್ಯಕ್ಷೆ ಲೀಲಾ ಕೃಷ್ಣಪ್ಪ ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ ಪಶು ಸಂಗೋಪನಾ ಇಲಾಖೆ ಅಧಿಕಾರಿ ಮನೋಹರ್ ಇಲಾಖೆಯ ಬಗ್ಗೆ ಮಾಹಿತಿ ನೀಡಲು ಮುಂದಾದಾಗ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು. ಗ್ರಾಮಸ್ಥರು ಮಾತನಾಡಿ ಗ್ರಾಮಕ್ಕೆ ಖಾಯಂ ಆಗಿ ಪಶು ಸಂಗೋಪನಾ ಇಲಾಖೆ ಅಧಿಕಾರಿಯನ್ನು ನೇಮಕ ಮಾಡುವಂತೆ ಆಗ್ರಹಿಸಿದರು. ಇದಕ್ಕೆ ಪಂಚಾಯತ ಅಧ್ಯಕ್ಷೆ ಲೀಲಾ ಕೃಷ್ಣಪ್ಪ ಕೂಡ ಸಹಮತ ವ್ಯಕ್ತಪಡಿಸಿ ಈ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಪಂಚಾಯತ್ ವ್ಯಾಪ್ತಿಯಲ್ಲಿ ನಾಯಿಗಳು ವಿಚಿತ್ರ ರೋಗದಿಂದ ಬಳಲುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರೊಬ್ಬರು ಹೇಳಿದರು.
ಪಂಚಾಯಿತಿ ವ್ಯಾಪ್ತಿಯ ಪಂಜ ಉಲ್ಯದಲ್ಲಿ ಮೆಸ್ಕಾಂ ಇಲಾಖೆಯ ತಂತಿಗಳು ಗದ್ದೆಯಲ್ಲಿ ಕೈಗೆಟಕುವಂತೆ ಇದ್ದು ಅಪಾಯ ಸೃಷ್ಟಿಸುತ್ತಿದೆ ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪಂಚಾಯತ್ ಉಪಾಧ್ಯಕ್ಷ ಸುರೇಶ್ ಪಂಜ ಮೆಸ್ಕಾಂ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿ ಸರಿಪಡಿಸುವಂತೆ ಒತ್ತಾಯಿಸಿದರು.
ಕಳೆದ ದಿನದ ಹಿಂದೆ ರಿಕ್ಷಾ ನಿಲ್ದಾಣದ ಬಳಿ ಅಪಘಾತ ಸಂಭವಿಸಿದ್ದು ತಮಗೆ ಸೂಕ್ತ ರಕ್ಷಣೆ ಒದಗಿಸಲು ಪಕ್ಷಿಕೆರೆ ಬಸ್ಸುನಿಲ್ದಾಣದ ಬಳಿ ನೂತನ ರಿಕ್ಷಾ ನಿಲ್ದಾಣ ಕಟ್ಟಿಸಿಕೊಡಲು ಹಾಗೂ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಲು ರಿಕ್ಷಾ ಚಾಲಕರು ಸಭೆಯಲ್ಲಿ ಮನವಿ ಮಾಡಿದರು.
ಕೊರೋನಾ ಸಂದರ್ಭದಲ್ಲಿ ಹಗಲಿರುಳು ಶ್ರಮಿಸಿದ ಪಂಚಾಯತ್ ಸದಸ್ಯರು ಹಾಗೂ ಕೊರೋನಾ ವಾರಿಯರ್ಸ್ ರವರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಪಂಚಾಯತ್ ಪಿಡಿಒ ಅರುಣ್ ಪ್ರದೀಪ ಡಿಸೋಜ ಮಾತನಾಡಿ ಪಂಚಾಯತ್ ವ್ಯಾಪ್ತಿಯ ಕಸ ತ್ಯಾಜ್ಯ ವಿಲೇವಾರಿಗೆ ಗ್ರಾಮಸ್ಥರು ಸಹಕರಿಸಬೇಕು ಹಸಿ ಕಸ, ಒಣ ಕಸ ಬೇರ್ಪಡಿಸಲು ಪಂಚಾಯಿತಿಯಿಂದ ಗ್ರಾಮಸ್ಥರಿಗೆ ಉಚಿತವಾಗಿ ಬಕೆಟ್ ನೀಡಲಾಗುತ್ತಿದ್ದು ದುರುಪಯೋಗಪಡಿಸಿಕೊಳ್ಳದೆ ಸ್ವಚ್ಛತೆಗೆ ಸಹಕರಿಸಿ ಎಂದು ಮನವಿ ಮಾಡಿದರು.
ಗ್ರಾಮಸಭೆಗೆ ಮೂಡ ಅಧಿಕಾರಿಗಳು ಗೈರಾಗಿರುವ ಬಗ್ಗೆ ನಾಗರಿಕರು ಪ್ರಶ್ನಿಸಿ ಕೆಮ್ರಾಲ್ ಗ್ರಾಪಂ ಮೂಡ ವಲಯಕ್ಕೆ ಸೇರಿದ್ದು ಗೊಂದಲಮಯವಾಗಿದೆ ಈ ಬಗ್ಗೆ ಮಾಹಿತಿ ನೀಡಿ ಎಂದರು.ಇದಕ್ಕೆ ಪಂಚಾಯತ್ ಪಿಡಿಓ ಅರುಣ್ ಪ್ರದೀಪ್ ಡಿಸೋಜಾ ಉತ್ತರಿಸಿ ಈ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಿದ್ದು ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದರು.
ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಸಹಿತ ಮತ್ತಿತರ ಸಮಸ್ಯೆಗಳ ಬಗ್ಗೆ ಸದಸ್ಯ ಮಯ್ಯದ್ದಿ ಉತ್ತರಿಸಿ ಸರಿಪಡಿಸುವ ಭರವಸೆ ನೀಡಿದರು.ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಶೈಲ ವಿವಿಧ ಇಲಾಖೆಯ ಅಧಿಕಾರಿಗಳು ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
Kshetra Samachara
30/03/2022 05:07 pm