ಮೂಡುಬಿದಿರೆ: ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. ಇಲ್ಲಿ ಎಲ್ಲರೂ ಮಾತನಾಡುವ, ಪ್ರತಿಭಟಿಸುವ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಆದರೆ ನಮ್ಮನ್ನಾಳುವ ಸರಕಾರಗಳು ಕಾರ್ಮಿಕ ವರ್ಗಕ್ಕೆ ಸಿಗುವ ಸವಲತ್ತು ಹಾಗೂ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ದುಡಿಯುವ ವರ್ಗಕ್ಕೆ ದ್ರೋಹ ಮಾಡುತ್ತಿದ್ದಾರೆ ಎಂದು ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಮೂಡುಬಿದಿರೆ ತಾಲೂಕು ಕಚೇರಿ ಮುಂಭಾಗದಲ್ಲಿ ಕೇಂದ್ರ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆಯುವ ಅಖಿಲ ಭಾರತ ಸಾರ್ವತ್ರಿಕ ಮಹಾ ಮುಷ್ಕರದ ಅಂಗವಾಗಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಇಡೀ ಕಾನೂನುಗಳನ್ನು ಬಂಡವಾಳ ಶಾಹಿಗಳ ಪರವಾಗಿ ತಿದ್ದುಪಡಿ ಸರಕಾರ ಮಾಡುತ್ತಿದೆ. ಎಲ್ಲರಿಗೂ ಮಾತನಾಡುವ, ಮುಷ್ಕರ ಮಾಡುವ ಹಕ್ಕು ಇದೆ. ಅವರ ಹಕ್ಕುಗಳನ್ನು ಪ್ರಶ್ನೆ ಮಾಡುವಂತಿಲ್ಲ. ಕಾನೂನುಗಳನ್ನು ಎ.ಸಿ ಕೊಠಡಿಯಲ್ಲಿ ಕುಳಿತು ಬರೆದಿರೋದಲ್ಲ. ಇಡೀ ದೇಶದೊಳಗೆ ಹೋರಾಟ ಮಾಡಿ ಕಾನೂನನ್ನು ರಚಿಸಲಾಗಿದೆ. ಕಾರ್ಮಿಕ ವರ್ಗದವರಾಗಿರುವ ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಹಮಾಲಿ ನೌಕರರು ಸಹಿತ ಬಸ್‌ನಲ್ಲಿ ದುಡಿಯುವ ದಿನಗೂಲಿ ನೌಕರರು ಅತೀ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದು ಈ ಸಂಬಳಕ್ಕೆ ಆಡಳಿತ ಮಾಡುವ ಸರಕಾರದವರು ಪಡೆದು ತೋರಿಸಲಿ ಎಂದು ಸವಾಲೆಸೆದರು. ಜಾಗತೀಕರಣ, ಉದಾರೀಕರಣ ನೀತಿಗಳಿಂದಾಗಿ 21ನೇ ಅಖಿಲ ಭಾರತ ಮಹಾ ಮುಷ್ಕರ ನಿರಂತರವಾಗಿ ನಡೆಯುತ್ತಿದ್ದು, ಇದು ಎಚ್ಚರಿಕೆಯ ಗಂಟೆಯಾಗಿದೆ ಎಂದರು.
ನಂತರ ನೌಕರರ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಮೂಡುಬಿದಿರೆ ತಹಶೀಲ್ದಾರ್ ಪುಟ್ಟರಾಜು ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. ಕರ್ನಾಟಕ ಪ್ರಾಂತ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಯಾಧವ ಶೆಟ್ಟಿ, ಬಿಸಿಯೂಟ ನೌಕರರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರಿಜ, ಮೂಡುಬಿದಿರೆ ವಲಯ ಸಿಐಟಿಯುನ ಅಧ್ಯಕ್ಷೆ ರಮಣಿ, ಕಾರ್ಯದರ್ಶಿ ರಾಧ, ಉಪಾಧ್ಯಕ್ಷ ಶಂಕರ ವಾಲ್ಪಾಡಿ, ಜೊತೆ ಕಾರ್ಯದರ್ಶಿ ಲಕ್ಷ್ಮೀ , ದಲಿತ ಸಂಘದ ಕೃಷ್ಣಪ್ಪ ಕೋಣಾಜೆ, ಕಮಿಟಿ ಸದಸ್ಯರಾದ ಕೃಷ್ಣಪ್ಪ, ಜಯಾನಂದ ಪೂಜಾರಿ ಮಾರೂರು ಉಪಸ್ಥಿತರಿದ್ದರು.
Kshetra Samachara
29/03/2022 11:14 pm