ಮೂಡುಬಿದಿರೆ: ಪೋಲಿಯೋ ನಿರ್ಮೂಲನೆಯಲ್ಲಿ 1985 ರಿಂದ ಜಾಗತಿಕ ಮಟ್ಟದಲ್ಲಿ ನಿರಂತರವಾಗಿ ತೊಡಗಿಕೊಂಡು ಯಶಸ್ಸು ಕಂಡಿರುವ ರೋಟರಿ ಸೇವಾ ಸಂಘಟನೆ ಕಳೆದ ಕೊರೋನಾ ಮಹಾಮಾರಿಯ ಸಂದರ್ಭದಲ್ಲಿಯೂ ಪಿಎಂ ಕೇರ್ ಫಂಡ್‌ಗೆ 380 ಕೋಟಿ ರೂ. ಮೌಲ್ಯದ ನೆರವನ್ನು ನಗದು ಮತ್ತು ವಸ್ತು ರೂಪದಲ್ಲಿ ಸೇವೆಯಾಗಿ ನೀಡಿದ ಸಾರ್ಥಕತೆ ಹೊಂದಿದೆ ಎಂದು ರೋಟರಿ 3181 ಡಿಸ್ಟ್ರಿಕ್ಟ್ ಗವರ್ನರ್ ಎ.ಆರ್. ರವೀಂದ್ರ ಭಟ್ ಹೇಳಿದರು.
ಅವರು ನಿಶ್ಮಿತಾ ಪ್ಯಾರಡೈಸ್ ಹಾಲ್‌ನಲ್ಲಿ ಸಾರ್ವಜನಿಕರಲ್ಲಿ ರೋಟರಿ ಸೇವೆಯ ಅರಿವು ಮೂಡಿಸುವಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಾಮರಾಜ ನಗರ ಕಂದಾಯ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಂಚರಿಸಿದ ಎಕ್ಸ್ಪೀಯರಿಯನ್ಸ್ ರೋಟರಿ ವಾಹನ ಜಾಥಾ ಮೂಡುಬಿದಿರೆಯಲ್ಲಿ ಸಮಾರೋಪಗೊಂಡ ಬಳಿಕ ಮೂಡುಬಿದಿರೆ ರೋಟರಿ ಕ್ಲಬ್‌ಗೆ ತಮ್ಮ ಅಧಿಕೃತ ಭೇಟಿಯ ಸಂದರ್ಭದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.
ಶಿಕ್ಷಣ, ಹಸಿವು ಮತ್ತು ಆರೋಗ್ಯದ ಸೇವೆಯಲ್ಲಿ ರೋಟರಿ ವಿಶ್ವ ಮತ್ತು ದೇಶೀಯ ನೆಲೆಯಲ್ಲಿ ಸಕ್ರಿಯ ಸೇವೆಯಲ್ಲಿ ತೊಡಗಿಕೊಂಡಿದೆ. ವಿಶ್ವದಲ್ಲಿ 35 ಸಾವಿರಕ್ಕೂ ಅಧಿಕ ರೋಟರಿ ಕ್ಲಬ್‌ಗಳ 13.20 ಲಕ್ಷ ದೇಶದಲ್ಲೂ ಲಕ್ಷಾಂತರ ರೋಟರಿ ಸದಸ್ಯರು ಸಮಾಜ ಸೇವೆಯಲ್ಲಿ ಧನ್ಯತೆ ಕಾಣುತ್ತಿದ್ದಾರೆ. ಒಂದೇ ದಿನದಲ್ಲಿ ದೇಶದಲ್ಲಿ 10ಲಕ್ಷಕ್ಕಕೂ ಮಿಕ್ಕಿದ ಜನತೆಯ ರಕ್ತತಪಾಸಣೆ ನಡೆಸಿದ ದಾಖಲೆ ರೋಟರಿಯದ್ದಾಗಿದೆ.
ವಿದ್ಯಾಸೇತು ಯೋಜನೆಯ ಮೂಲಕ ರೋಟರಿ ಜಿಲ್ಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಶೈಕ್ಷಣಿಕ ನೆರವು ಒದಗಿಸಲಾಗಿದೆ ಎಂದ ರವೀಂದ್ರ ಭಟ್ ಮೂಡುಬಿದಿರೆಯಲ್ಲಿ ರೋಟರಿ ಶಾಲೆಯ ಮೂಲಕ ಶೈಕ್ಷಣಿಕ ಸಾಧನೆ, ಬ್ಲಡ್ ಬ್ಯಾಂಕ್ ಸ್ಥಾಪನೆ, ಕಡಲ ಕೆರೆ ನಿಸರ್ಗಧಾಮ ಯೋಜನೆ ಸಹಿತ ಕೆರೆಗಳ ಪುನರುತ್ಥಾನದ ಮಾದರಿ ಕಾರ್ಯಕ್ರಮ ರೋಟಾಲೇಕ್, ನೂರಾರು ಫಲಾನುಭವಿಗಳಿಗೆ ಉಚಿತ ಶೌಚಾಲಯದ ಯೋಜನೆ ರೋಟಾಲೆಟ್ ಮೂಲಕ ರೋಟರಿ ಜನತೆಗೆ ಆಪ್ತವಾಗಿದೆ ಎಂದವರು ಸಂತಸ ವ್ಯಕ್ತಪಡಿಸಿದರು.
ಅಸಿಸ್ಟೆಂಟ್ ಗರ‍್ನರ್ ಸುರೇಂದ್ರ ಕಿಣಿ, ರೋಟರಿ ಪಬ್ಲಿಕ್ ಇಮೇಜ್ ಜಿಲ್ಲಾ ಸಮಿತಿ ಅಧ್ಯಕ್ಷ ಸತೀಶ್ ಬೋಳಾರ, ಸಂಚಾಲಕ ಕ್ಯಾಂಡಿಡ್ ಪಿಂಟೋ, ಮೂಡುಬಿದಿರೆ ಸಮಿತಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ವಲಯ ಲೆಫ್ಟಿನೆಂಟ್ ಡಾ.ಮಹಾವೀರ ಜೈನ್, ವಲಯ ಕಾರ್ಯದರ್ಶಿ ಜಯರಾಮ ರೈ, ಮೂಡುಬಿದಿರೆ ರೋಟರಿ ಅಧ್ಯಕ್ಷ ಜೆ.ಡಬ್ಲ್ಯು. ಪಿಂಟೋ, ಕಾರ್ಯದರ್ಶಿ ಡಾ. ಆಶೀರ್ವಾದ್ ಮತ್ತಿತರು ಉಪಸ್ಥಿತರಿದ್ದರು.
Kshetra Samachara
26/03/2022 05:24 pm