ಸುಬ್ರಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಿರಾತಂಕವಾಗಿ ನಡೀತಿದ್ದು ದಂಧೆ ತಡೆಯಬೇಕಾದ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯೇ ದಂಧೆಕೋರರ ಜೊತೆ ಶಾಮೀಲಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಲೇ ಇದೆ.
ಜಿಲ್ಲೆಯ ಗಡಿಭಾಗದ ನಿಂತಿಕಲ್, ಪಂಜ ಸುತ್ತಮುತ್ತ ಹತ್ತಾರು ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ "ಮಾಮೂಲಿ" ಎಂಬಂತೆ ನಡೀತಿದ್ದು ಅಧಿಕಾರಿಗಳೇ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ದೂರು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ನಿಂತಿಕಲ್ ಪಂಜ ಸಮೀಪದ ಕೇನ್ಯ ತ್ರಿಶೂಲಿನಿ ದೇವಸ್ಥಾನ ರಸ್ತೆಯಾಗಿ ವಿಷ್ಣುಮೂರ್ತಿ ದೈವಸ್ಥಾನಕ್ಕೆ ಸಾಗುವಾಗ ಕೆಲವೇ ಕಿ.ಮೀ. ದೂರದಲ್ಲಿ ನದಿಯ ಕವಲು ಹೊಳೆಯಿಂದ ಕಳೆದ ಕೆಲವು ಸಮಯಗಳಿಂದ ಅಕ್ರಮ ಮರಳುಗಾರಿಕೆ ಯಥಾಪ್ರಕಾರ ನಡೆಯುತ್ತಿದೆ. ಈ ಬಗ್ಗೆ ಮಾಹಿತಿ ಇದ್ದರೂ ಗಣಿ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಕಣ್ಮುಚ್ಚಿ ಕೂತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಲ್ಲಿ ತೆಪ್ಪ, ದೋಣಿ ಬಳಸಿ ಮರಳು ಸಂಗ್ರಹಿಸುತ್ತಿದ್ದು ಟಿಪ್ಪರ್ ಮೂಲಕ ಸುಬ್ರಮಣ್ಯ, ಗುಂಡ್ಯ, ಸಕಲೇಶಪುರ ಕಡೆಗೆ ದಿನವೊಂದಕ್ಕೆ 40-50 ಲೋಡ್ ಗಳಷ್ಟು ಮರಳು ಸಾಗಾಟ ಮಾಡಲಾಗುತ್ತಿದೆ. ದಂಧೆಕೋರರು ಸರಕಾರಕ್ಕೆ ರಾಜಧನ ವಂಚಿಸಿ ವಿವಿಧ ಇಲಾಖೆಗಳಿಗೆ ಮಾಮೂಲಿ ಕೊಟ್ಟು ವೈವಾಟ್ ನಡೆಸುತ್ತಿದ್ದು ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ನಿದ್ದೆಯಿಂದ ಎದ್ದೇಳಬೇಕಿದೆ.
ಮರಳು ದಿಬ್ಬ ತೆರವು ಮಾಡಲು ಲೀಸ್ ಗೆ ಪಡೆದಿರುವ ಗುತ್ತಿಗೆದಾರರು ತಮ್ಮ ವ್ಯಾಪ್ತಿ ಬಿಟ್ಟು ಎಲ್ಲೆಂದರಲ್ಲಿ ಹಿತಾಚಿ, ಡ್ರೆಜ್ಜಿಂಗ್ ಮೆಷಿನ್ ಬಳಸಿ ಮರಳುಗಾರಿಕೆ ನಡೆಸುತ್ತಿದ್ದು ಕಡಬ, ಸುಬ್ರಮಣ್ಯ, ಬೆಳ್ತಂಗಡಿ, ಸುಳ್ಯ, ಸಂಪಾಜೆ ಭಾಗದಲ್ಲಿ ನದಿಯ ಒಡಲನ್ನೇ ಬರಿದು ಮಾಡುತ್ತಿದ್ದಾರೆ. ಭಾರೀ ಗಾತ್ರದ ಲಾರಿಗಳ ಓಡಾಟದಿಂದ ಸಾರ್ವಜನಿಕ ಸಂಪರ್ಕ ರಸ್ತೆ ಹದಗೆಟ್ಟಿದ್ದು ಜನರು ಜೀವಭಯದಲ್ಲೇ ಬದುಕುವಂತಾಗಿದೆ.
Kshetra Samachara
19/02/2022 04:39 pm