ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ನಡೆಯಿತು.
ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾಜೀ ಸಚಿವ ರಮಾನಾಥ ರೈ ಮಾತನಾಡಿ "ಜವಾಹರ ಲಾಲ್ ನೆಹರೂ ಅವರು ದೇಶಕ್ಕಾಗಿ ಮಾಡಿದ ತ್ಯಾಗವನ್ನು ಇಂದು ಅವಮಾನ ಮಾಡಲಾಗುತ್ತಿದೆ. ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತಂದಿರುವ ಸುಧಾರಣೆಗಳಿಂದ ನಾವು ಬದುಕುತ್ತಿದ್ದೇವೆ. ಅಕ್ರಮ ಸಕ್ರಮ, ಭೂ ಸುಧಾರಣಾ ಕಾಯ್ದೆಯಿಂದ ಇಂದು ಜನರಿಗೆ ಭೂಮಿ, ಮನೆ ಎಲ್ಲವೂ ಸಿಕ್ಕಿದೆ. ಅವರ ಬಲಿದಾನವನ್ನು ಸ್ಮರಿಸಲು ಇವರಿಂದ ಆಗುವುದಿಲ್ಲ ಎಂದಾದರೆ ಇವರ ಮನೋಸ್ಥಿತಿ ಯಾವ ರೀತಿಯದ್ದಾಗಿರಬಹುದು" ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ಬಿ.ಎ. ಮೊಯಿದೀನ್ ಬಾವಾ ಮಾತನಾಡಿ "ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದ ಏಕೈಕ ಪಕ್ಷವೊಂದಿದ್ದರೆ ಅದು ಕಾಂಗ್ರೆಸ್ ಮಾತ್ರ. ಆದರೆ ಇಂದು ಅಧಿಕಾರ ಪಡೆದಿರುವ ಪಕ್ಷವು ಜನರ ಮಧ್ಯೆ ಕಂದರವನ್ನು ಸೃಷ್ಟಿಸುತ್ತಿದೆ. ಜನರನ್ನು ಜಾತಿ ಮತಗಳ ಆಧಾರದಲ್ಲಿ ಒಡೆದು ಆಳುವ ನೀತಿ ಮುಂದುವರಿಸಿದೆ. ಇದನ್ನು ತಡೆಯುವ ಮೂಲಕ ದೇಶದಲ್ಲಿ ಜನರ ಮಧ್ಯೆ ಒಗ್ಗಟ್ಟನ್ನು ಮರು ಸ್ಥಾಪಿಸಲು ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕಾದ ತುರ್ತು ಅವಶ್ಯಕತೆಯಿದೆ" ಎಂದರು.
ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ನಾವೆಲ್ಲರೂ ಒಂದಾಗಿ ಶ್ರಮಿಸೋಣ ಎಂದರು.
ವೇದಿಕೆಯಲ್ಲಿ ಮಾಜೀ ಸಚಿವ ವಿನಯ್ ಕುಮಾರ್ ಸೊರಕೆ,ಮಾಜಿ ಶಾಸಕ ಜೆ.ಆರ್. ಲೋಬೊ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್ ರೈ, ಕೃಪಾ ಅಮರ್ ಆಳ್ವ, ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ, ಶಾಲೆಟ್ ಪಿಂಟೋ, ಕೃಷ್ಣ ಅಮೀನ್, ಲಾರೆನ್ಸ್ ಡಿಸೋಜ, ಕೆಪಿಸಿಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹ್ಯಾರಿಸ್ ಬೈಕಂಪಾಡಿ, ಗುರುಪುರ ಬ್ಲಾಕ್ ಅಧ್ಯಕ್ಷ ಸುರೇಂದ್ರ ಕಂಬಳಿ, ಸುರತ್ಕಲ್ ಬ್ಲಾಕ್ ಅಧ್ಯಕ್ಷ ಉಮೇಶ್ ದಂಡೆಕೇರಿ, ಪ್ರಕಾಶ್ ಸಾಲಿಯಾನ್, ಅಲ್ಪಸಂಖ್ಯಾತ ವಿಭಾಗದ ಮುಹಮ್ಮದ್ ಸಮೀರ್ ಕಾಟಿಪಳ್ಳ, ಮಾಜಿ ಮೇಯರ್ ಹರಿನಾಥ್, ಕೆ.ಮುಹಮ್ಮದ್, ಶಾಹುಲ್ ಹಮೀದ್, ಗಿರೀಶ್ ಆಳ್ವ, ಅನಿಲ್ ಕುಮಾರ್, ಯು.ಕೆ ಮೋನಪ್ಪ ಉಪಸ್ಥಿತರಿದ್ದರು. ರೆಹಮಾನ್ ಖಾನ್ ಕಾರ್ಯಕ್ರಮ ನಿರೂಪಿಸಿದರು.
ಮುಂಜಾನೆ 10 ಗಂಟೆಗೆ ಕಾವೂರು ಜಂಕ್ಷನ್ ನಿಂದ ಪ್ರಾರಂಭವಾದ ನಡಿಗೆಯು ಮಧ್ಯಾಹ್ನ ವಾಮಂಜೂರು ಜಂಕ್ಷನ್ ನಲ್ಲಿ ಸಮಾಪನಗೊಂಡಿತು.
Kshetra Samachara
30/08/2022 06:03 pm