ಮೂಡುಬಿದಿರೆ: ಪ್ರತಾಪ್‍ಚಂದ್ರ ಶೆಟ್ಟಿ ಅವರನ್ನು ಸಭಾಪತಿ ಹುದ್ದೆಯಿಂದ ಕೆಳಗಿಳುಸುವ ಹುನ್ನಾರ ನಡೆದಿದೆ. ಜೆಡಿಎಸ್‍ನ ಅಧಿಕಾರ ದಾಹ, ಬಿಜೆಪಿಯ ನೀತಿರಹಿತ ರಾಜಕರಣದಿಂದಾಗಿ ಸಜ್ಜನ ರಾಜಕಾರಣಿಗೆ ಅನ್ಯಾಯವಾಗಿದೆ. ಇದರ ವಿರುದ್ಧ ಜಿಲ್ಲೆಯ ಪ್ರಜ್ಞಾವಂತ ಜನತೆ ಹಾಗೂ ರಾಜಕಾರಣಿಗಳು ಧ್ವನಿ ಎತ್ತಬೇಕಾಗಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಸುದ್ದಿಗೋಷ್ಠಿಯಲ್ಲಿ ಸೋಮವಾರ ಹೇಳಿದರು.
ಚುನಾವಣೆಯಲ್ಲಿ ಸೋತ ಬಳಿಕ ಪ್ರತಾಪ್‍ಚಂದ್ರರು ರಾಜಕೀಯದಿಂದ ನಿವೃತ್ತಿಯಾಗುವ ಇಂಗಿತ ವ್ಯಕ್ತಪಡಿಸಿದಾಗ ನಾನು, ರಮಾನಾಥ ರೈ, ವಿನಯ ಕುಮಾರ್ ಸೊರಕೆ ಅವರನ್ನು ಮತ್ತೆ ರಾಜಕೀಯದಲ್ಲಿ ಮುಂದುವರಿಯುವಂತೆ ಪ್ರೋತ್ಸಾಹ ನೀಡಿದ್ದೆವು. ರಾಜಕೀಯದಲ್ಲಿ ಅವರು ಕಳೆಕೊಂಡಿದ್ದೆ ಹೆಚ್ಚು. ನಿಷ್ಟಾವಂತರಾಗಿರುವ ಪ್ರತಾಪ್‍ಚಂದ್ರ ಶೆಟ್ಟಿ ಅವರು ಕಾಂಗ್ರೆಸ್ ಆಡಳಿತದಲ್ಲಿ ವಿಧಾನಪರಿಷತ್ತಿನ ಸಭಾಪತಿ ಹುದ್ದೆ ಸಿಕ್ಕಿತ್ತು. ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಬಿಜೆಪಿಯ ಡಿ.ಎಚ್ ಶಂಕರ್‍ಮೂರ್ತಿ ವಿಧಾನಪರಿಷತ್ತಿನ ಸಭಾಪತಿಯಾಗಿದ್ದರೂ ಅವರನ್ನು ಹುದ್ದೆಯಿಂದ ಕೆಳಗಿಳಿಸಲಿಲ್ಲ. ಆದರೆ ಜಾತ್ಯಾತೀತ ಸಿದ್ಧಾಂತದ ಪಕ್ಷ ಎಂದು ಹೇಳಿಕೊಳ್ಳುತ್ತಿರುವ ಜೆಡಿಎಸ್ ಪಕ್ಷವು ಬಿಜೆಪಿ ಜತೆ ಸೇರಿಕೊಂಡು ಪ್ರತಾಪ್‍ಚಂದ್ರ ಶೆಟ್ಟಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ತಂತ್ರಗಾರಿಕೆ ಹೆಣೆದಿದೆ. ಇದು ಸಭಾಪತಿ ಹುದ್ದೆಗೆ ಮಾಡಿದ ಅವಮಾನ. ಮೌಲ್ಯಯುತ ಸಿದ್ಧಾಂತವನ್ನು ಅನುಸರಿಸಿಕೊಂಡು ಬಂದಿರುವ ರಾಜಕಾರಣಿಗಳಿಗೆ ಈಗ ಬೆಲೆ ಇಲ್ಲ ಎಂಬುದು ಪ್ರತಾಪ್‍ಚಂದ್ರ ಶೆಟ್ಟಿ ಪ್ರಕರಣದಲ್ಲಿ ಸಾಬೀತಾಗಿದೆ ಎಂದು ಅವರು ಹೇಳಿದರು.
Kshetra Samachara
01/02/2021 07:23 pm