ಬಂಟ್ವಾಳ: ವಿದಾರ್ಥಿಗಳ ಬಸ್‌ಪಾಸ್ ವಿತರಣೆಯಲ್ಲಿ ವಿಳಂಬ ಧೋರಣೆ ಹಾಗೂ ಕೆಎಸ್‌ಆರ್‌ಟಿಸಿಯ ಅವ್ಯವಸ್ಥೆ ನೀತಿ ಖಂಡಿಸಿ ವಿದ್ಯಾರ್ಥಿ ಒಕ್ಕೂಟ, ಬಂಟ್ವಾಳ ಘಟಕದ ನೇತೃತ್ವದಲ್ಲಿ ಶುಕ್ರವಾರ ಬೆಳಿಗ್ಗೆ ಬಿ.ಸಿ.ರೋಡಿನ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಸುದ್ದಿ ತಿಳಿದ ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಕಾಂಗ್ರೆಸ್ ನ ಸ್ಥಳೀಯ ಮುಖಂಡರು ಸ್ಥಳಕ್ಕೆ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು.
ಈಗಾಗಲೇ ಶಾಲೆ- ಕಾಲೇಜುಗಳು ಹಂತ ಹಂತವಾಗಿ ಆರಂಭಗೊಳ್ಳುತ್ತಿದ್ದು, ಸರಕಾರಿ ಬಸ್ ಪಾಸ್ ವಿತರಣೆಯಲ್ಲಿನ ದೋಷದಿಂದಾಗಿ ವಿದ್ಯಾರ್ಥಿಗಳು ತೊಂದರೆ ಪಡುವಂತಾಗಿದೆ. ದೂರದ ಊರುಗಳಿಂದ ಶಾಲೆ, ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಸರಕಾರಿ ಬಸ್ಸುಗಳನ್ನೇ ಅವಲಂಬಿಸಿದ್ದಾರೆ. ಕೋವಿಡ್‌ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಅನೇಕ ಮಂದಿ ವಿದ್ಯಾರ್ಥಿಗಳು ನಿತ್ಯವೂ ಬಸ್ಸಿಗೆ ಹಣ ನೀಡಿ ಹೋಗುವುದು ಕಷ್ಟ ಸಾಧ್ಯವಾಗಿದ್ದು, ಮತ್ತೆ ಮನೆಯಲ್ಲೇ ಉಳಿಯ ಬೇಕಾಗಿದೆ. ಇದರಿಂದ ಪಾಠ- ಪ್ರವಚನಕ್ಕೂ ತೊಂದರೆಯಾಗುತ್ತಿದೆ. ಬಸ್ ಪಾಸ್ ಮಾಡಿಸಲು ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಕಚೇರಿಗೆ ಬಂದಾಗ ಕ್ಷುಲ್ಲಕ ಕಾರಣ ನೀಡಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಪಾಸ್ ಮಾಡಿಸಲು ಕಾಲೇಜು ಬಿಟ್ಟು ರಾತ್ರಿವರೆಗೆ ಬಸ್ಸು ನಿಲ್ದಾಣದಲ್ಲಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿ ಒಕ್ಕೂಟದ ಬಂಟ್ವಾಳ ತಾಲೂಕು ಅಧ್ಯಕ್ಷ ಇಸ್ರಾರ್ ಗೂಡಿನಬಳಿ ಮಾತನಾಡಿ, ಈ ಹಿಂದೆಲ್ಲ ಅತಿ ಸುಲಭವಾಗಿ ವಿದ್ಯಾರ್ಥಿಗಳಿಗೆ ಬಸ್‌ಪಾಸ್ ಸಿಗುತ್ತಿತ್ತು. ಈಗ ಸೇವಾ ಸಿಂಧು ಆ್ಯಪ್ ಮೂಲಕ ಬಸ್‌ಪಾಸ್ ಪಡೆಯಲು ಇಲಾಖೆ ವ್ಯವಸ್ಥೆ ಕಲ್ಪಿಸಿದ್ದು, ಒಂದು ತಿಂಗಳು ಕಳೆದರೂ ಪಾಸ್ ಸಿಗದೆ ವಿದ್ಯಾರ್ಥಿಗಳು ತೊಂದರೆ ಪಡುತ್ತಿದ್ದಾರೆ. ನಮ್ಮ ಸಮಸ್ಯೆಗೆ ಇಲಾಖೆಯ ಅಧಿಕಾರಿಗಳು ಸ್ಪಂದಿಸಬೇಕು. ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಬಸ್ಸು ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಮಾಜಿ ಸಚಿವ ಬಿ. ರಮಾನಾಥ ರೈ ತಕ್ಷಣ ಸ್ಥಳಕ್ಕೆ ಆಗಮಿಸಿ ಇಲಾಖೆಯಿಂದ ವಿದ್ಯಾರ್ಥಿಗಳಿಗಾಗುತ್ತಿರುವ ತೊಂದರೆ ಬಗ್ಗೆ ಮಾಹಿತಿ ಪಡೆದುಕೊಂಡರು. ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಅವರು, ಬಸ್‌ನಿಲ್ದಾಣದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ತೊಂದರೆಯಾಗದಂತೆ ಬಸ್‌ಪಾಸ್ ವಿತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪ್ರತಿಭಟನೆಯನ್ನು ಕೈ ಬಿಟ್ಟು ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವಂತೆ ಮನವಿ ಮಾಡಿಕೊಂಡ ಅವರು, ಸಮಸ್ಯೆ ಬಗೆಹರಿಯದೆ ಹೋದಲ್ಲಿ ವಿದ್ಯಾರ್ಥಿಗಳ ಹೋರಾಟದಲ್ಲಿ ನಾವೂ ಸೇರಿಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭ ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಎನ್‌ಎಸ್‌ಯುಐ ಆರ್‌ಟಿಐ ಸೆಲ್‌ನ ರಾಷ್ಟ್ರೀಯ ಸಂಚಾಲಕ ಅನ್ವಿತ್ ಕಟೀಲ್, ಎನ್‌ಎಸ್‌ಯುಐ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವಿನಯ್ ಕುಮಾರ್ ಸಿಂಧ್ಯಾ, ಕಾರ್ಯದರ್ಶಿ ಮುಹಮ್ಮದ್ ಶಫೀಕ್, ಸಂಯೋಜಕ ನಜೀಬ್ ಮಂಚಿ, ಅಫ್ತಾಭ್ ಶಾಹಿರ್, ಅಫ್ತಾಬ್ ಅಲಿ, ಅರ್ಬಾಝ್ ಅಲಿ ಉಪಸ್ಥಿತರಿದ್ದರು. ಬಳಿಕ ಸಂಚಾರ ನಿರೀಕ್ಷಕಿ ಶಿಲ್ಪ ಎಂ. ಗೌಡ ಅವರ ಮೂಲಕ ಮನವಿ ಸಲ್ಲಿಸಲಾಯಿತು.
Kshetra Samachara
29/01/2021 04:25 pm