ಬಂಟ್ವಾಳ: ಬಂಟ್ವಾಳ ತಾಲೂಕು ಸಹಿತ ಉಡುಪಿಯಿಂದ ಕಾಸರಗೋಡಿಗೆ ಸಾಗುವ ಹೈಟೆನ್ಶನ್ ವಿದ್ಯುತ್ ಸರಬರಾಜು ಯೋಜನೆಗೆ ಕೇಂದ್ರ, ರಾಜ್ಯ ಸರಕಾರಗಳು ಅನುಮತಿ ನೀಡಿರುವುದು ಖಂಡನೀಯ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಅನೇಕ ಗ್ರಾಮಗಳ ಮಧ್ಯೆ ಉಡುಪಿಯಿಂದ- ಕಾಸರಗೋಡಿಗೆ ಹೈಟೆನ್ಶನ್ ವಿದ್ಯುತ್ ಸರಬರಾಜು ಯೋಜನೆಗೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಅನುಮತಿ ನೀಡಿದೆ ಎಂದು ಆರೋಪಿಸಿ, ಈ ಕುರಿತು ಹೋರಾಟ ರೂಪಿಸಲು ಸಮಾನ ಮನಸ್ಕರ ಹೋರಾಟ ಸಮಿತಿ ಬಂಟ್ವಾಳ ವತಿಯಿಂದ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಇತರ ಸಂಘ- ಸಂಸ್ಥೆಗಳ ಮುಖಂಡರು ಹಾಗೂ ಯೋಜನೆಯಿಂದ ಕೃಷಿ ಭೂಮಿ ನಷ್ಟ ಕ್ಕೊಳಗಾಗುವವರು ಬಿ.ಸಿ.ರೋಡಿನಲ್ಲಿ ಸೇರಿದ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನಾದ್ಯಂತ ಗ್ರಾಮಗಳಿಗೆ ಸಂಚರಿಸಿ ಈ ಯೋಜನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಈ ಯೋಜನೆ ಸಂಪೂರ್ಣ ಕೈಬಿಡುವವರೆಗೆ ಹೋರಾಟ ನಡೆಸುವುದಾಗಿ ಸಮಿತಿ ಸದಸ್ಯರಾದ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಹೇಳಿದರು. ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಕಾಂಗ್ರೆಸ್ ಕಿಸಾನ್ ಘಟಕ ಜಿಲ್ಲಾಧ್ಯಕ್ಷ ಮೋಹನ್ ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಪದ್ಮನಾಭ ರೈ, ವಿವಿಧ ಸಂಘಟನೆಗಳ ಮುಖಂಡರಾದ ಬಿ.ಶೇಖರ್, ಪಿ.ಎ.ರಹೀಂ, ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಸಹಿತ ಹಲವು ಮುಖಂಡರು ಉಪಸ್ಥಿತರಿದ್ದರು.
Kshetra Samachara
26/01/2021 08:29 pm