ಬಂಟ್ವಾಳ: ತಾಲೂಕಿನ 57 ಗ್ರಾ ಪಂಗಳ 822 ಸ್ಥಾನಗಳಿಗೆ ಡಿ.22ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಬುಧವಾರ ಡಿ.30ರಂದು ಬೆಳಗ್ಗೆ 8 ಗಂಟೆಗೆ ಆರಂಭವಾದ್ದು, ಮುಕ್ತಾಯಗೊಳ್ಳುವಾಗ ಗುರುವಾರ ಬೆಳಗ್ಗೆ ಆಗಸದಲ್ಲಿ ಸೂರ್ಯೋದಯದ ತಯಾರಿ ನಡೆದಿತ್ತು.
ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇರುವ 89 ಎಣಿಕೆ ಟೇಬಲ್ ಗಳಲ್ಲಿ ಮತ ಎಣಿಕೆ ಮಾಡಲು ಆಗಮಿಸಿದ 95 ಮೇಲ್ವಿಚಾರಕರು, 190 ಎಣಿಕೆ ಸಹಾಯಕರು, 50 ಡಿ ಗ್ರೂಪ್ ಸಿಬ್ಬಂದಿ ಹಾಗೆಯೇ ಇವುಗಳನ್ನು ದಾಖಲೀಕರಣ ಮಾಡುವ ಸಿಬ್ಬಂದಿ ಜೊತೆ ಸುಮಾರು 300ರಷ್ಟು ಪೊಲೀಸ್ ಸಿಬ್ಬಂದಿ, ಸುಮಾರು 20 ತಾಸುಗಳ ಕಾಲ ನಡೆದ ಮ್ಯಾರಥಾನ್ ಮತ ಎಣಿಕೆಯಲ್ಲಿ ಪಾಲ್ಗೊಂಡು ಸುಸ್ತಾದರು.
ಇವರೊಂದಿಗೆ ಬುಧವಾರ ಬೆಳಗ್ಗೆಯೇ ಮತ ಎಣಿಕೆ ಕೇಂದ್ರದತ್ತ ಹೆಜ್ಜೆ ಹಾಕಿದ್ದ ದೂರದೂರಿನಿಂದ ಆಗಮಿಸಿದ ಅಭ್ಯರ್ಥಿಗಳು, ಅಭ್ಯರ್ಥಿಗಳ ಪರ ಏಜೆಂಟರು ಬಸವಳಿಯಬೇಕಾಯಿತು.
ಬೆಳಗ್ಗಿನ ಥಂಡಿ, ಮಧ್ಯಾಹ್ನದ ಬಿಸಿಲಿನ ಜೊತೆಗೆ ಬೆವರಿದ ಜನರು, ತಡರಾತ್ರಿಯಾದರೂ ಮುಗಿಯದ ಎಣಿಕೆ ಕಾರ್ಯದಿಂದ ಒಮ್ಮೆ ಮುಕ್ತಿ ಸಿಕ್ಕಿದರೆ ಸಾಕು ಎಂಬ ಸ್ಥಿತಿಗೆ ಬಂದಿದ್ದರು!
Kshetra Samachara
31/12/2020 06:23 pm