ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಿವಾದಿತ ಮಳಲಿ ಮಸೀದಿ ಭೂಮಿಯಲ್ಲಿ ಗುರುಪುರ ಜಂಗಮ ಮಠದ ಶಾಖಾ ಮಠ ಇತ್ತು?

ನಗರದ ಹೊರವಲಯದಲ್ಲಿರುವ ಮಳಲಿ ಮಂದಿರ - ಮಸೀದಿ ವಿವಾದಿತ ಪ್ರದೇಶವು ಗುರುಮಠವೊಂದಕ್ಕೆ ಸೇರಿರುವ ಸ್ಥಳವಾಗಿತ್ತು ಎಂದು ಮೊನ್ನೆ ನಡೆದಿರುವ ತಾಂಬೂಲ ಪ್ರಶ್ನೆಯಲ್ಲಿ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಗುರುಪುರ ಶ್ರೀ ಜಂಗಮ ಸಂಸ್ಥಾನ ಮಠದ ಪೀಠಾಧಿಪತಿ ರುದ್ರಮುನಿ ಮಹಾಸ್ವಾಮೀಜಿಯವರು ಈ ಮಸೀದಿಯಿರುವ ಸ್ಥಳದಲ್ಲಿ ಹಿಂದೆ ತಮ್ಮ ಜಂಗಮ ಸಂಸ್ಥಾನ ಮಠದ ಶಾಖಾ ಮಠವೊಂದು ಇತ್ತು. ಇದಕ್ಕೆ ತಮ್ಮಲ್ಲಿ ಲಿಖಿತ ರೂಪದ ದಾಖಲೆಯೂ ಇದೆ ಎಂದು ಹೇಳಿಕೆ ನೀಡಿರುವುದು ಭಾರೀ ಕುತೂಹಲಕ್ಕೆ ಎಡೆ ಮಾಡಿದೆ.

ತಾಂಬೂಲ ಪ್ರಶ್ನೆಯಲ್ಲಿ ಈಗ ಮಸೀದಿಯಿರುವ ಸ್ಥಳದಲ್ಲಿ ಹಿಂದೆ ಗುರುಮಠವಿತ್ತು. ಅಲ್ಲಿ ಶಿವ ಹಾಗೂ ದೇವಿಯ ಆರಾಧನೆ ನಡೆಯುತ್ತಿತ್ತು ಎಂದು ಗೋಚರಿಸಿತ್ತು. ದೈವಜ್ಞರ ತಾಂಬೂಲ ಪ್ರಶ್ನಾಚಿಂತನೆಯಿಂದ ಬೆಳಕಿಗೆ ಬಂದಿರುವ ಈ ವಿಚಾರವು ಸತ್ಯ ಎಂದಿರುವ ರುದ್ರಮುನಿ ಮಹಾಸ್ವಾಮೀಜಿಯವರು 'ನಮ್ಮ ಎಲ್ಲಾ ಮಠಗಳಲ್ಲಿ ಶಿವನ ಆರಾಧನೆಯೊಂದಿಗೆ, ದೇವಿ ಆರಾಧನೆಯೂ ನಡೆಯುತ್ತಿರುತ್ತದೆ. ವೀರಶೈವ ಲಿಂಗಾಯತ ಪರಂಪರೆಯಲ್ಲಿ 'ಹರನೇ ಗುರು - ಗುರುವೇ ಹರ' ಅಂದರೆ ಶಿವನನ್ನೇ ಗುರುವಿನ ಪ್ರತೀಕವಾಗಿ ಕಾಣಲಾಗುತ್ತದೆ. ಅಲ್ಲದೆ ನಮ್ಮ ಮಠದಲ್ಲಿ ಚೌಡಮ್ಮನ ಆರಾಧನೆಯೂ ನಡೆಯುತ್ತಿತ್ತು. ಆದ್ದರಿಂದ ಮಳಲಿ ಮಸೀದಿಯ ಭೂಮಿಯಲ್ಲಿ ಹಿಂದೆ ಇದ್ದ ಮಠವು ನಮ್ಮ ಗುರುಪುರ ಮಠದ ಅಧೀನದಲ್ಲಿದ್ದ ಮತ್ತೊಂದು ಶಾಖಾ ಮಠ ಎಂಬುದರಲ್ಲಿ ಎಳ್ಳಷ್ಟು ಸಂಶಯವಿಲ್ಲ ಎಂದಿದ್ದಾರೆ.

ಉಡುಪಿ ಹಾಗೂ ಮಂಗಳೂರಿನಲ್ಲಿ ವೀರಶೈವ ಲಿಂಗಾಯತ ಪರಂಪರೆಯ 64 ಮಠಗಳಿವೆ. ಅವುಗಳಲ್ಲಿ ಮಳಲಿಯಲ್ಲಿದ್ದ ಮಠವೂ ಒಂದು. ಇಡೀ ಮಳಲಿ ಗ್ರಾಮವೇ ಗುರುಪುರ ಜಂಗಮ ಮಠದ ಅಧೀನಕ್ಕೆ ಒಳಪಟ್ಟಿತ್ತು. ಅದರಂತೆ ಈ ಮಸೀದಿರುವ ಜಾಗದಲ್ಲಿ ಹಿಂದೆ ಇದ್ದ ಮಳಲಿ ಮಠವೂ ಈ ಜಂಗಮ ಮಠದ ಶಾಖಾ ಮಠವೇ ಆಗಿತ್ತು ಎಂದು ಸ್ವಾಮೀಜಿ ಪ್ರತಿಪಾದಿಸಿದ್ದಾರೆ.

ಗುರುಪುರ ಜಂಗಮ ಸಂಸ್ಥಾನ ಮಠದಲ್ಲಿ ಈ ಹಿಂದೆ ಇಟ್ಟಿರುವ ತಾಂಬೂಲ ಪ್ರಶ್ನೆ, ಅಷ್ಟಮಂಗಲ ಪ್ರಶ್ನೆಯ ಪ್ರಕಾರ ಮಳಲಿ ಮಸೀದಿರುವ ಪ್ರದೇಶದಲ್ಲಿ ಮತ್ತೆ ದೈವಸಾನಿಧ್ಯವು ಜೀರ್ಣೋದ್ಧಾರವಾದಲ್ಲಿ ಗುರುಪುರ ಮಠವೂ ಅಭಿವೃದ್ಧಿ ಆಗಲಿದೆ ಎಂದು ಕಂಡು ಬಂದಿತ್ತು. ಅಲ್ಲದೆ ನಮ್ಮ ಮಠದಿಂದ ಈ ಹಿಂದೆ ಮುಸಲ್ಮಾನ ಸಮಾಜದ ಮಸೀದಿಗೂ ಜಾಗ ಬಿಟ್ಟುಕೊಡಲಾಗಿತ್ತು. ಆದ್ದರಿಂದ ನಮ್ಮ ಹಿರಿಯ ಸ್ವಾಮೀಜಿಗಳು ಮಸೀದಿ ಕಟ್ಟಲು ಜಾಗವನ್ನು ಕೊಟ್ಟಂತೆ, ಮಸೀದಿಯ ಜಾಗವನ್ನು ಈಗಿನ ಆಡಳಿತ ಮಂಡಳಿ ಮಠಕ್ಕೆ ಬಿಟ್ಟು ಕೊಡಬೇಕೆಂಬುದು ಸ್ವಾಮೀಜಿಯವರ ಮನವಿ. ಇದೆಲ್ಲಾ ಬೆಳವಣಿಗೆಯ ನಡುವೆ ತಾಂಬೂಲ ಪ್ರಶ್ನೆ ಇರಿಸಿದ್ದ ವಿಎಚ್ ಪಿ ತಂಡವೂ ರುದ್ರಮುನಿ ಮಹಾಸ್ವಾಮೀಜಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಈ ಎಲ್ಲಾ ನಡೆಯು ಮುಂದಿನ ಬೆಳವಣಿಗೆ ಯಾವ ರೀತಿ ಇರಲಿದೆ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಪಬ್ಲಿಕ್ ನೆಕ್ಸ್ಟ್ ಫಾಲೋಅಪ್ ವರದಿ : ವಿಶ್ವನಾಥ ಪಂಜಿಮೊಗರು

Edited By :
Kshetra Samachara

Kshetra Samachara

27/05/2022 12:28 pm

Cinque Terre

6.41 K

Cinque Terre

1

ಸಂಬಂಧಿತ ಸುದ್ದಿ