ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ‘ಶ್ರೀರಕ್ಷಾ’ ಪರ್ಸಿನ್ ಬೋಟ್ ದುರಂತಕ್ಕೆ ಸಂಬಂಧಿಸಿ ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಪರಿಹಾರ ಧನ ಬಿಡುಗಡೆಮಾಡಬೇಕೆಂದು ಶಾಸಕ ವೇದವ್ಯಾಸ್ ಕಾಮತ್ ಸದನದಲ್ಲಿ ಸರಕಾರಕ್ಕೆ ಮನವಿ ಸಲ್ಲಿಸಿದರು.
ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ 25 ಜನರಿದ್ದ ದೋಣಿ ಮುಳುಗಡೆಯಾಗಿ 19 ಜನರು ಪ್ರಾಣಾಪಾಯದಿಂದ ಪಾರಾಗಿ ಆರು ಮಂದಿ ಸಮುದ್ರಪಾಲಾದ ಘಟನೆಯ ಕುರಿತು ಸದನದಲ್ಲಿ ಮಾತನಾಡಿದ ಶಾಸಕ ಕಾಮತ್, ಆರು ಮೀನುಗಾರರಲ್ಲಿ ಒಬ್ಬರು ಇನ್ನೂ ಪತ್ತೆಯಾಗಿಲ್ಲ. ಶೋಧ ಕಾರ್ಯ ನಡೆಯುತ್ತಿದೆ ಎಂದರು.
ಈಗಾಗಲೇ ಮೀನುಗಾರಿಕಾ ಇಲಾಖೆಯು ಮೃತರ ಕುಟುಂಬಗಳಿಗೆ ತಲಾ ಆರು ಲಕ್ಷ ರೂ. ಪರಿಹಾರ ಧನವನ್ನು ಸಂಸದ ನಳಿನ್ ಕುಮಾರ್ ಕಟೀಲ್, ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ನೀಡಿದ್ದಾರೆ.
ಬೇರೆಡೆ ಸಂಭವಿಸಿದ ದೋಣಿ ದುರಂತ ಘಟನೆಗಳಲ್ಲಿ 10 ಲಕ್ಷದವರೆಗೆ ಪರಿಹಾರ ನೀಡಲಾಗಿದೆ. ಹಾಗಾಗಿ ಸರ್ಕಾರ ಮುತುವರ್ಜಿ ವಹಿಸಿ ಹೆಚ್ಚಿನ ಪರಿಹಾರ ಧನ ಬಿಡುಗಡೆಗೊಳಿಸುವಂತೆ ಶಾಸಕ ಕಾಮತ್ ಮನವಿ ಮಾಡಿಕೊಂಡರು.
ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಮೀನುಗಾರಿಕಾ ಸಚಿವರು ಹಾಗೂ ಸರಕಾರದ ಜೊತೆ ಈ ಕುರಿತು ಚರ್ಚಿಸಲಾಗುವುದು ಎಂದರು.
Kshetra Samachara
11/12/2020 11:09 am