ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ಸೇರಿದಂತೆ 10 ಮಹಾನಗರಪಾಲಿಕೆಗಳಿಗೆ 125 ಕೋಟಿ ರೂ. ಬಿಡುಗಡೆ ಮಾಡಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಗುರುವಾರ ರಾಜ್ಯ ಕಾರ್ಯಕಾರಿಣಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಈಗಾಗಲೇ 50 ಕೋಟಿ ರೂ. ಮಂಜೂರು ಮಾಡಲಾಗಿದೆ ಬರುವ ದಿನಮಾನಗಳಲ್ಲಿ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು ಎಂದರು.
ಇದೇ ವೇಳೆ ಲವ್ ಜಿಹಾದ್ ಬಗ್ಗೆ ಮಾತನಾಡಿದ ಸಿಎಂ ಕೇವಲ ವಿವಾಹವಾಗುವ ಉದ್ದೇಶದಿಂದ ಮತಾಂತರ ಹುನ್ನಾರವನ್ನು ರಾಜ್ಯದಲ್ಲಿ ಸಹಿಸಲಾಗದು, ಅಂತಹ ಸಂಚನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ನಮ್ಮ ರಾಜ್ಯದಲ್ಲಿ ಸಣ್ಣವಯಸ್ಸಿನ ಹೆಣ್ಣು ಮಕ್ಕಳನ್ನು ಹಣದ ಆಮಿಷವೊಡ್ಡಿ, ಪ್ರೇಮದ ನಾಟಕವಾಡಿ ಮತಾಂತರ ಗೊಳಿಸಿ ಮದುವೆಯಾಗುವ ಪ್ರಕರಣ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು.
ರಾಜ್ಯದಲ್ಲಿ ಕೊರೊನಾದಿಂದ ಹದಗೆಟ್ಟಿದ್ದ ಹಣಕಾಸಿನ ವ್ಯವಸ್ಥೆ ಈಗಾ ಸುಧಾರಣೆಯಾಗುತ್ತಿದೆ. ಶಾಸಕರಿಗೆ 50 ಲಕ್ಷದ ಅನುದಾನ ಬಿಡುಗಡೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ , ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಡಿ.ವಿ. ಸದಾನಂದಗೌಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ,ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Kshetra Samachara
05/11/2020 02:09 pm