ಮೂಡುಬಿದಿರೆ: ವಸತಿ ಯೋಜನೆಗಳಗೆ ಸರಕಾರದಿಂದ ಅನುದಾನ ಬಿಡುಗಡೆಯಾಗದೆ ಫಲಾನುಭವಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಹಿಂದೆ ಮಂಜೂರಾತಿ ಆದೇಶ ನೀಡಿದ ಅನೇಕ ಪಲಾನುಭವಿಗಳ ಮನೆಗಳು ಅನುದಾನ ಇಲ್ಲದೆ ಅರ್ಧದಲ್ಲಿ ನಿಂತಿವೆ. ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಫಲಾನುಭವಿಗಳ ಜತೆಗೂಡಿ ಮರಸಭೆ ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಪುರಸಭೆಯ ಕಾಂಗ್ರೆಸ್ ಸದಸ್ಯರು ಎಚ್ಚರಿಕೆ ನೀಡಿದರು.
ಪುರಸಭೆ ವಿಶೇಷ ಸಭೆ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ಇದೀಗ ಮನೆಗಳಿಗೆ, ಹೊಸ ಪಲಾನುಭವಿಗಳ ಆಯ್ಕೆ ನಡೆಯುತ್ತಿದೆ. ಅರ್ಜಿ ಸಂದರ್ಭ ಕೇಳುವ ಕೆಲವು ದಾಖಲೆಗಳನ್ನು ಒದಗಿಸಲು ಸಾಧ್ಯವಾಗದೆ ಅನೇಕ ಮಂದಿ ಯೋಜನೆಯಿಂದ ವಂಚಿತರಾಗುತ್ತಿದ್ದು ಅವರೆಲ್ಲಾ ನಮ್ಮನ್ನು ಪ್ರಶ್ನಿಸುವಂತಾಗಿದೆ ಎಂದು ಸದಸ್ಯ ಸುರೇಶ್ ಪ್ರಭು ಆಕ್ರೋಶ ವ್ಯಕ್ತಪಡಿಸಿದರು. ಕೆಲವರಿಗೆ ಹಕ್ಕುಪತ್ರ ಸಿಕ್ಕಿದರೂ ಇನ್ನೂ ಸ್ಥಳ ಗುರುತಿಸಿಲ್ಲ. ಈ ಬಗ್ಗೆ ಪುರಸಭೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಪುರಸಭೆ ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಅವರು ಎಚ್ಚರಿಸಿದರು.
ಅರ್ಜಿದಾರರಿಂದ ಭೂಪರಿವರ್ತನೆ ದಾಖಲೆ, ಖಾತೆ ಕೇಳುವುದಕ್ಕೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಜಿಲ್ಲಾ ಸಮಾಜ ಅಭಿವೃದ್ಧಿ ತಂತ್ರಜ್ಞ ತನೂರಿಯಾ ಅರ್ಧದಲ್ಲಿ ಕಾಮಗಾರಿ ನಿಂತಿರುವ ಮನೆಗಳಿಗೆ ಅನುದಾನ ಬಿಡುಗಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವಾಜಪೇಯಿ ವಸತಿ ಯೋಜನೆಯಲ್ಲಿ ೪೦ ಮತ್ತು ಅಂಬೇಡ್ಕರ್ ವಸತಿ ಯೋಜನೆಯಲ್ಲಿ ೧೮ ಹೊಸ ಫಲಾನುಭವಿಗಳ ಪಟ್ಟಿ ಸಿದ್ಧವಾಗಿದ್ದು ಜಿಲ್ಲಾಧಿಕಾರಿಯಿಂದ ಅನುಮೋದನೆ ಪಡೆದು ಎರಡು ವಾರಗಳೊಳಗೆ ಪಲಾನುಭವಿಗಳಿಗೆ ಮಂಜೂರಾತಿ ಆದೇಶ ನೀಡುವುದಾಗಿ ತಿಳಿಸಿದರು. ಪುರಸಭೆಯ ಸಮುದಾಯ ಸಂಘಟಕ ಮುರಳೀಧರ ಅವರ ಕಾರ್ಯವೈಖರಿಯ ಬಗ್ಗೆ
ಸದಸ್ಯರು ಸಭೆಯಲ್ಲಿ ಚರ್ಚೆ ನಡೆಸಿದರು. ವಸತಿ ಯೋಜನೆಗಳಗೆ ಅರ್ಜಿ ಸಲ್ಲಿಸುವಾಗ ಆಧಾರ್, ರೇಶನ್ ಕಾರ್ಡ್, ಆದಾಯ ಪತ್ರ ಹಾಗೂ ಆರ್‌ಟಿಸಿ ಕಡ್ಡಾಯ. ಆದರೆ ಅವರು ಬ್ಯಾಂಕ್‌ನಿಂದ ಸಾಲಪಡೆಕೊಳ್ಳಲು ಇಚ್ಚಿಸಿದರೆ ಜಾಗದ ಭೂಪರಿವರ್ತನೆ, ಖಾತೆಯ
ದಾಖಲೆಗಳು ಬೇಕಾಗುತ್ತದೆ ಎಂದು ಅಧಿಕಾರಿ ಉತ್ತರಿಸಿದರು.
ಮುಂದಿನ ಸಭೆಯ ಒಳಗೆ ಪಲಾನುಭವಿಗಳಿಗೆ ಜಿಲ್ಲಾಧಿಕಾರಿಯ ಅನುಮತಿ ಪಡೆದು ಮಂಜೂರಾತಿ ಆದೇಶ ನೀಡುವುದಾಗಿ ಮುಖ್ಯಾಧಿಕಾರಿ ಇಂದು ಸಭೆಗೆ ತಿಳಿಸಿದರು. ಹೌಸಿಂಗ್ ಎಂಜಿನಿಯರ್ ಗಿರೀಶ್ ಪೈ ಉಪಸ್ಥಿತರಿದ್ದರು.
Kshetra Samachara
13/09/2022 08:37 pm