ಮೂಡುಬಿದಿರೆ : ಹುಟ್ಟಿದ ಮಗುವಿನಿಂದ ಆರು ತಿಂಗಳ ವರೆಗೆ ಮಕ್ಕಳಿಗೆ ಎದೆ ಹಾಲನ್ನಲ್ಲದೆ ಬೇರೆ ಯಾವುದೇ ಪದಾರ್ಥಗಳನ್ನು ನೀಡಬಾರದು.ಮಕ್ಕಳು ಎದೆ ಹಾಲು ಕುಡಿಯುವುದರಿಂದ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಆರೋಗ್ಯವಂತ ಮಕ್ಕಳಾಗಿ ಬೆಳೆಯುತ್ತಾರೆ ಎಂದು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲ ಹೇಳಿದರು.
ಅವರು ದ.ಕ.ಜಿ.ಪಂ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಹಾಗೂ ಬಾಲ ವಿಕಾಸ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವಲಯದ ರಾಣಿಕೇರಿ ಅಂಗನವಾಡಿ ಕೇಂದ್ರದಲ್ಲಿ ನಡೆದ ವಿಶ್ವ ಸೈನ್ಯಪಾನ ಸಪ್ತಾಹ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ಪುರಸಭಾ ಸದಸ್ಯ ಕೊರಗಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ರಮ್ಯಾ, ಸದಸ್ಯ ಸತೀಶ್ ಕೋಟ್ಯಾನ್, ಆಳ್ವಾಸ್ ಆಹಾರ ಪದ್ಧತಿ ವಿಭಾಗದ ಉಪನ್ಯಾಸಕಿ ಆಶಿತಾ, ಆಲ್ ಬದ್ರಿಯಾ ಸಮಿತಿಯ ಇಬ್ದುಲ್ ಲತೀಫ್, ಆರೋಗ್ಯ ಸುರಕ್ಷಾಧಿಕಾರಿ ಶಾಸಿ, ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಪ್ರೀತಿ,
ಮಕ್ಕಳ ತಾಯಂದಿರು, ಸ್ತ್ರೀ ಶಕ್ತಿ ಸದಸ್ಯರು ಉಪಸ್ಥಿತರಿದ್ದರು.
ಅಳ್ವಾಸ್ ಆಹಾರ ಪದ್ಧತಿ ವಿಭಾಗದ ವಿದ್ಯಾರ್ಥಿಗಳು "ಮಗು ತಾಯಿ ಗರ್ಣಿಣಿ ಆರೈಕೆಯ ಬಗ್ಗೆ ನಾಟಕವನ್ನು ಪ್ರದರ್ಶಿಸಿ ಜಾಗೃತಿಯನ್ನು ಮೂಡಿಸಿದರು.
ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಭಾರತಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಆಟಿಡೊಂಜಿ ದಿನ ಕಾರ್ಯಕ್ರಮದಂಗವಾಗಿ ಪೌಷ್ಠಿಕಾಂಶ ಭರಿತ ವಿವಿಧ ಚಟ್ನಿ ಮತ್ತು ತಿಂಡಿ ತಿನಿಸುಗಳನ್ನು ಪ್ರದರ್ಶಿಸಲಾಯಿತು.
Kshetra Samachara
05/08/2022 09:43 pm