ಮೂಡುಬಿದಿರೆ : ಮಳೆಯಿಂದ ಹಾನಿಗೊಳಗಾಗಿರುವ ಇರುವೈಲು ಗ್ರಾಮದ ಪಂಜ, ಹೊಸಬೆಟ್ಟು ಗ್ರಾಮದ ಶೇಡಿಗುರಿ, ಮೂಡುಬಿದಿರೆ ಕಡಲಕೆರೆ ಬಳಿಯ ರಸ್ತೆ ಹಾಗೂ ಕಡಂದಲೆಯ ಕಲ್ಲೋಳಿ, ನಲ್ಲೆಗುತ್ತು ಪ್ರದೇಶಗಳಿಗೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಇರುವೈಲಿನ ಪ್ರಶಾಂತ್ ಮತ್ತು ರಾಜೇಶ್ ಎಂಬವರ ಅಡಿಕೆ ತೋಟದ ಮಣ್ಣು ಸಡಿಲಗೊಂಡರಿಡೀ ತೋಟ ಕೆಳಭಾಗಕ್ಕೆ ಜಾರಿದ ಪರಿಣಾಮ ತೋಟದ ಮೇಲ್ಭಾಗದಲ್ಲಿದ್ದ ಮನೆಯು ಕಳೆದ ವಾರ ಕುಸಿತಗೊಂಡು ಅಪಾಯದ ಅಂಚಿಗೆ ಸಿಲುಕಿಕೊಂಡಿದೆ. ಹೊಸಬೆಟ್ಟು ಗ್ರಾಮದ ಶೇಡಿಗುರಿ ಮುಖ್ಯ ರಸ್ತೆಯ ಬದಿಯ ಗುಡ್ಡ ಭಾನುವಾರ ಸಂಜೆ ಕುಸಿದಿದ್ದು ಮರಗಳು ರಸ್ತೆಗೆ ಉರುಳಿ ಬಿದ್ದಿದ್ದವು ಹಾಗೂ ಆಲಂಗಾರು-ಬೆಳ್ಮಣ್ ಸಂಪರ್ಕಿಸುವ ಬಳಿಯ ಕಡಲಕೆರೆ ಕೈಗಾರಿಕಾ ವಲಯದ ಮುಂಭಾಗದ ರಸ್ತೆಯು ಎರಡು ದಿನಗಳ ಹಿಂದೆ ಕುಸಿದು ವಾಹನಗಳ ಸಂಚಾರಕ್ಕೆ ತೊಂದರೆಯುಂಟ್ಟಾಗಿತ್ತು ಈ ಬಗ್ಗೆ ಶಾಸಕರು ಸಂಬಂಧಪಟ್ಟ ಇಲಾಖೆಗಳಿಗೆ ಸರಿಪಡಿಸುವಂತೆ ಸೂಚನೆ ನೀಡಿದ್ದರಿಂದ ಕೆಲಸಗಳನ್ನು ಆರಂಭಿಸಲಾಗಿತ್ತು. ಅಲ್ಲದೆ ಕಡಂದಲೆಯ ಶಾಂಭವಿ ಹೊಳೆ ತುಂಬಿದರಿAದ ಕಲ್ಲೋಳಿ ಹಾಗೂ ನಲ್ಲೆಗುತ್ತು ಪ್ರದೇಶಗಳಲ್ಲಿ ಹೊಳೆಯ ನೀರು ಮೇಲ್ಗಡೆ ತುಂಬಿದರಿಂದ ಸೇತುವೆ ಜಲಾವೃತಗೊಂಡಿತ್ತು ಇದರಿಂದಾಗಿ ಪರಿಸರದ ಜನರಿಗೆ ಸಮಸ್ಯೆಯುಂಟಾಗಿತ್ತು ಈ ಬಗ್ಗೆ ಪರಿಶೀಲನೆ ನಡೆಸಲು ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ತುರ್ತು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇರುವೈಲು ಗ್ರಾ.ಪಂ.ಅಧ್ಯಕ್ಷ ವಲೇರಿಯನ್ ಕುಟಿನ್ಹಾ, ಸದಸ್ಯರಾದ ನಾಗೇಶ್, ಪ್ರದೀಪ್, ಉಮೇಶ್ ಪೂಜಾರಿ ಪುಚ್ಚಮೊಗರು, ಪಾಲಡ್ಕ ಗ್ರಾ.ಪಂ.ಅಧ್ಯಕ್ಷ ದಿನೇಶ್ ಕಂಗ್ಲಾಯಿ, ಸದಸ್ಯ ರಂಜಿತ್ ಭಂಡಾರಿ, ತಾ.ಪಂನ ಮಾಜಿ ಸದಸ್ಯ ರಮೇಶ್ ಪೂಜಾರಿ, ಗ್ರಾ.ಪಂನ ಮಾಜಿ ಸದಸ್ಯ ಮೋಹನ್ ಶೆಟ್ಟಿ, ಕಂದಾಯ ನಿರೀಕ್ಷಕ ಮಂಜುನಾಥ್, ಗ್ರಾಮಕರಣಿಕ ಶ್ರೀನಿವಾಸ ಈ ಸಂದರ್ಭದಲ್ಲಿದ್ದರು.
Kshetra Samachara
11/07/2022 03:55 pm