ಬಂಟ್ವಾಳ: ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಂಸ್ಕೃತಿಯ ಪ್ರತೀಕವಾಗಿರುವ ಕಾಶ್ಮೀರ, ಅಯೋಧ್ಯೆ ಸೇರಿದಂತೆ ಇಡೀ ರಾಷ್ಟ್ರದಲ್ಲಿ ಧನಾತ್ಮಕ ಬದಲಾವಣೆಯಾಗಿದ್ದು, ಭಾರತೀಯ ಮೌಲ್ಯಗಳ ರಕ್ಷಣೆಯ ಕಾರಣಕ್ಕೆ ಬಿಜೆಪಿ ಅಧಿಕಾರದಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ಕಡೆಗೋಳಿಯಲ್ಲಿ ಬಿಜೆಪಿ ಪುದು ಮಹಾಶಕ್ತಿ ಕೇಂದ್ರದ ವತಿಯಿಂದ ಆಯೋಜಿಸಿದ್ದ ಕುಟುಂಬ ಮಿಲನ ಸಮಾವೇಶವನ್ನು ಉದ್ಘಾಟಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಬಿಜೆಪಿಯು ಜಗತ್ತಿನಲ್ಲೇ ದೊಡ್ಡ ಪಕ್ಷವಾಗಿದ್ದು, ಅಂತಹ ಪಕ್ಷದ ಸದಸ್ಯರು ಎನ್ನಲು ನಾವೆಲ್ಲರೂ ಹೆಮ್ಮೆಪಡಬೇಕು. ಕಾರ್ಯಕರ್ತರ ಸಂಭ್ರಮಕ್ಕಾಗಿ ಬಂಟ್ವಾಳದಲ್ಲಿ ಕಮಲೋತ್ಸವ ಹೆಸರಿನ ಕುಟುಂಬ ಮಿಲನ ಯಶಸ್ವಿ ರೀತಿಯಲ್ಲಿ ನಡೆದಿದ್ದು, ಕೆಳಮಟ್ಟದಲ್ಲಿ ಪಕ್ಷವನ್ನು ಗಟ್ಟಿ ಮಾಡುವ ದೃಷ್ಟಿಯಿಂದ ಮಹಾಶಕ್ತಿ ಕೇಂದ್ರ ವ್ಯಾಪ್ತಿಯಲ್ಲೂ ಇಂತಹ ಕಾರ್ಯಕ್ರಮ ನಡೆಯಬೇಕು ಎಂದರು. ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಮಾತನಾಡಿ, ಪಕ್ಷದ ಕಾರ್ಯಕರ್ತರು ಒಂದೇ ಕುಟುಂಬದ ಸದಸ್ಯರು ಎಂಬ ಕಲ್ಪನೆಯಲ್ಲಿ ಇಂತಹ ಸಮಾವೇಶ ನಡೆಯುತ್ತಿದ್ದು, ಈ ಮೂಲಕ ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ಶಾಸಕನನ್ನು ವಿಧಾನಸಭೆಗೆ ಕಳುಹಿಸುವ ಸಂಕಲ್ಪವನ್ನು ಕಾರ್ಯಕರ್ತರು ಮಾಡಬೇಕಿದೆ ಎಂದರು.
ವೇದಿಕೆಯಲ್ಲಿ ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.ನ ಅಧ್ಯಕ್ಷ ಸಂತೋಷ್‌ಕುಮಾರ್ ರೈ ಬೋಳಿಯಾರು, ರಾಜ್ಯ ಅಲೆಮಾರಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮೊದಲಾದವರು ಇದ್ದರು.ಸಂಸ್ಕಾರ ಭಾರತಿಯ ಜಿಲ್ಲಾಧ್ಯಕ್ಷ ಟಿ.ತಾರಾನಾಥ ಕೊಟ್ಟಾರಿ ಅವರು ಪಕ್ಷಕ್ಕೆ ಹಿರಿಯ ಕಾರ್ಯಕರ್ತರ ಶ್ರಮವನ್ನು ಪರಿಚಯಿಸಿದರು.
ಪುದು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಸತೀಶ್ ನಾಯ್ಗ ಕೊಡ್ಮಾಣ್ ಕೋಡಿ ಸ್ವಾಗತಿಸಿದರು. ಪ್ರಜ್ವಲ್ ಎ.ಸಿದ್ದಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.
Kshetra Samachara
16/05/2022 04:14 pm