ಬಂಟ್ವಾಳ: ಬಿಜೆಪಿಯ ಕೃಪಾಕಟಾಕ್ಷದಿಂದ ಬಂಟ್ವಾಳ ತಾಲೂಕಿನಲ್ಲಿ ಜುಗಾರಿ, ಮರಳು ಮಾಫಿಯಾದಂತ ಅಕ್ರಮ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿದ್ದು ಇದರ ವಿರುದ್ಧ ಕ್ರಮಕೈಗೊಳ್ಳಬೇಕಾದ ಪೊಲೀಸ್ ಇಲಾಖೆ ಕೂಡಾ ನಿಷ್ಕ್ರಿಯಯಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದರು.
ಮೆಲ್ಕಾರ್, ಬಿ.ಸಿ.ರೋಡು, ಬಂಟ್ವಾಳ ಬೈಪಾಸ್, ಪುಂಜಾಲಕಟ್ಟೆ, ಕೈಕಂಬ ಸಹಿತ ತಾಲೂಕಿನ ಬಹುತೇಕ ಕಡೆಗಳಲ್ಲಿ ಅಕ್ರಮವಾಗಿ ಜುಗಾರಿ ಅಡ್ಡೆಗಳು ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಅಧಿಕಾರಶಾಹಿ ಪಕ್ಷದ ಕೃಪಾಕಟಾಕ್ಷ ಇದೆ. ಹಾಗಾಗಿ ಇವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪೊಲೀಸ್ ಇಲಾಖೆ ಮೌನವಾಗಿದೆ ಎಂದು ಅವರು ಹೇಳಿದರು.
ಜುಗಾರಿ ಅಡ್ಡೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಹೆಣ್ಣುಮಕ್ಕಳ ಚಿನ್ನಾಭರಣ ಅಡವಿಟ್ಟು ಜೂಜಾಟದಲ್ಲಿ ತೊಡಗಿಸುತ್ತಿದ್ದಾರೆ. ಇದರಿಂದ ಕೌಟುಂಬಿಕ ಕಲಹ ಹೆಚ್ಚಾಗುತ್ತಿದೆ. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಸಂಬಂಧಪಟ್ಟ ಅಧಿಕಾರಿಗಳು ನಿಯಂತ್ರಣ ಮಾಡುವ ಕೆಲಸ ಮಾಡಬೇಕು ಎಂದು ಅವರು ಆಗ್ರಹಿಸಿದರು.
ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಕೂಡಾ ರಾಜಾರೋಷವಾಗಿ ನಡೆಯುತ್ತಿದೆ. ತಾಲೂಕಿನ ಕಡೆಶೀವಾಲಯ, ಸರಪಾಡಿ, ಆರಿಕಲ್ಲು, ಜಡ್ತಿಲ ಸೇರಾ ಭಾಗದಲ್ಲಿ ಮರಳು ಮಾಫಿಯ ನಡೆಯುತ್ತಿದೆ. ಇದು ಕೂಡಾ ಬಿಜೆಪಿಯ ಕೃಪಾಕಟಾಕ್ಷದಿಂದ ನಡೆಯುತ್ತಿದೆ. ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರೇ ಬಿಜೆಪಿಯ ಪೋಷಕರಾಗಿದ್ದು ಇದು ಬ್ಯಾನರ್, ಕಟೌಟ್ ನಲ್ಲಿ ಸಾಬೀತಾಗುತ್ತಿದೆ ಎಂದು ಅವರು ಹೇಳಿದರು.
ಅಕ್ರಮ ಮರಳುಗಾರಿಕೆ ನಡೆಸುವವರ ಮನೆಗೆ ಪೊಲೀಸರು ಭೇಟಿ ನೀಡಿ ಬರುತ್ತಾರೆ. ಮರಳುಗಾರಿಕೆ ಬಗ್ಗೆ ದೂರು ನೀಡಿದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲ. ಅಕ್ರಮ ಜುಗಾರಿ ಅಡ್ಡೆ, ಮರಳುಗಾರಿಕೆ ಮೊದಲಾದ ಬಗ್ಗೆ ಕಾಂಗ್ರೆಸ್ ಪಕ್ಷದ ವತಿಯಿಂದ ದೂರು ನೀಡಲಾಗಿತ್ತು. ಆ ಬಳಿಕ ಕೆಲವು ಸಮಯ ನಿಂತಿದ್ದ ಜುಗಾರಿ ಅಡ್ಡೆಗಳು ಮತ್ತೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ನುಡಿದರು.
ಕನ್ಯಾನ ಭಾಗದಿಂದ ಸಾವಿರಾರು ಯುನಿಟ್ ಮಣ್ಣು ಸಿಮೆಂಟ್ ಕಂಪೆನಿಯೊಂದಕ್ಕೆ ಸಾಗಾಟವಾಗುತ್ತಿದೆ. ಸಿಮೆಂಟ್ ಕಂಪೆನಿಗೆ ಮಣ್ಣು ಸಾಗಾಟ ಆಗುತ್ತಿದೆ ಎಂದಾದರೆ ಆ ಮಣ್ಣಿನಲ್ಲಿ ಯಾವುದಾದರೂ ಅಂಶ ಅಡಗಿರಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ವೈಜ್ಞಾನಿಕವಾಗಿ ಪರೀಕ್ಷೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭಾ ಅಧ್ಯಕ್ಷ ಮುಹಮ್ಮದ್ ಶರೀಫ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಜಿಪಂ ನಕಟಪೂರ್ವ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಪದ್ಮನಾಭ ರೈ, ತಾಪಂ ನಿಕಟಪೂರ್ವ ಉಪಾಧ್ಯಕ್ಷ ಅಬ್ಬಾಸ್ ಅಲಿ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
03/12/2021 01:44 pm