ಬಂಟ್ವಾಳ: ಬಿ.ಸಿ.ರೋಡು- ಜಕ್ರಿಬೆಟ್ಟು ಚತುಷ್ಪಥ ಕಾಂಕ್ರೀಟ್ ಹೆದ್ದಾರಿಯ ಕಾಮಗಾರಿಯು ಬಹುತೇಕ ಅಂತಿಮ ಹಂತಕ್ಕೆ ತಲುಪಿದ್ದು, ಹೆದ್ದಾರಿ ಬದಿಗೆ ಇಂಟರ್ಲಾಕ್ ಅಳವಡಿಕೆಯ ಕಾಮಗಾರಿ ಪ್ರಗತಿಯಲ್ಲಿದೆ.
ಎಂಆರ್ಪಿಎಲ್ ಪೈಪುಲೈನ್ ಸ್ಥಳಾಂತರದ ಹಿನ್ನೆಲೆಯಲ್ಲಿ ಮೂರು ಕಡೆಯ ಕಾಂಕ್ರೀಟ್ ಕಾಮಗಾರಿ ಹೊರತುಪಡಿಸಿದರೆ ಉಳಿದಂತೆ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಿದೆ. ಬಿ.ಸಿ.ರೋಡು- ಪುಂಜಾಲಕಟ್ಟೆ ಮಧ್ಯೆ 19.85 ಕಿ.ಮೀ.ಉದ್ದದ ಕಾಮಗಾರಿಯು 2018ರಲ್ಲಿ ಪ್ರಾರಂಭಗೊಂಡಿದ್ದು, ಅದರಲ್ಲಿ ಜಕ್ರಿಬೆಟ್ಟುವರೆಗೆ 3.85 ಕಿ.ಮೀ. ಚತುಷ್ಪಥ ಕಾಂಕ್ರೀಟ್ ಹೆದ್ದಾರಿ ಮಂಜೂರಾಗಿತ್ತು. ಪ್ರಸ್ತುತ ಹೆದ್ದಾರಿಯ ಎಲ್ಲಾ ಹಂತದ ಕಾಮಗಾರಿ ಪೂರ್ಣಗೊಂಡು ಗಾಣದಪಡ್ಪು ಬಳಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿಯ ಮಧ್ಯ ಭಾಗಕ್ಕೆ ಇಂಟರ್ಲಾಕ್ ಅಳವಡಿಕೆಯ ಕಾಮಗಾರಿ ನಡೆಯುತ್ತಿದೆ.
ಚತುಷ್ಪಥ ಕಾಂಕ್ರೀಟ್ ಕಾಮಗಾರಿಗಾಗಿ ಹೆದ್ದಾರಿಯು ವಿಸ್ತಾರಗೊಂಡ ಹಿನ್ನೆಲೆಯಲ್ಲಿ ಸರಪಾಡಿಯ ನೇತ್ರಾವತಿ ನದಿಯಿಂದ ಎಂಆರ್ಪಿಎಲ್ಗೆ ನೀರು ಪೂರೈಕೆ ಮಾಡುವ ಪೈಪುಲೈನ್ ಸ್ಥಳಾಂತರ ಮಾಡಬೇಕಿತ್ತು. ಕಾಮಗಾರಿಯ ಹಿನ್ನೆಲೆಯಲ್ಲಿ ಗಾಣದಪಡ್ಪು ಕಾಮಗಾರಿ ಕ್ರಾಸ್ ಬಳಿ, ಭಂಡಾರಿಬೆಟ್ಟು ನೆರೆ ವಿಮೋಚನಾ ರಸ್ತೆ ಕ್ರಾಸ್ ಬಳಿ ಹಾಗೂ ಜಕ್ರಿಬೆಟ್ಟುನಲ್ಲಿ ಹೀಗೆ ಮೂರು ಕಡೆ ಒಂದು ಬದಿಯ ಹೆದ್ದಾರಿಗೆ ಕಾಂಕ್ರೀಟ್ ಅಳವಡಿಸುವುದಕ್ಕೆ ಬಾಕಿ ಇದೆ.
ಬೈಪಾಸ್ ಭಾಗದಲ್ಲಿ ಸುಮಾರು ಒಂದು ತಿಂಗಳ ಹಿಂದೆ ಕಾಂಕ್ರೀಟ್ ಕಾಮಗಾರಿ ನಡೆದಿದ್ದು, ಡಿವೈಡರ್ ನಿರ್ಮಿಸುವ ಕಾರ್ಯ ಬಾಕಿ ಇದೆ. ಬಿ.ಸಿ.ರೋಡಿನಿಂದ ಬೈಪಾಸ್ ಡಿವೈಡರ್ ಮಧ್ಯೆ ತಡೆಬೇಲಿಯ ಅಳವಡಿಕೆ ಪೂರ್ಣಗೊಂಡಿದ್ದು, ಅದರ ಬಳಿ ತಡೆಬೇಲು ಹಾಕಿಲ್ಲ. ಹೊಸದಾಗಿ ಕಾಂಕ್ರೀಟ್ ಹಾಕಿರುವ ಹಾಗೂ ಇನ್ನು ಹಾಕಲು ಬಾಕಿ ಇರುವ ಪ್ರದೇಶದಲ್ಲಿ ಚರಂಡಿ ಕಾಮಗಾರಿ ನಡೆಯಬೇಕಿದೆ. ಜಕ್ರಿಬೆಟ್ಟು ಭಾಗದಲ್ಲಿ ಬಂಟ್ವಾಳ ಪೇಟೆಯಿಂದ ಬಂದ ರಸ್ತೆಯು ಹೆದ್ದಾರಿ ಸೇರುವಲ್ಲಿ ಡಾಮಾರು ಹಾಕುವುದಕ್ಕೆ ಬಾಕಿಯಿದ್ದು, ಗುರುವಾರ ಆ ಕಾಮಗಾರಿಯೂ ನಡೆದಿದೆ. ಭಂಡಾರಿಬೆಟ್ಟು ಬಳಿ ನೆರೆ ವಿಮೋಚನಾ ರಸ್ತೆಯನ್ನು ಹೆದ್ದಾರಿಗೆ ಸಂಪರ್ಕಿಸುವ ಕಾಮಗಾರಿ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಗಾಣದಪಡ್ಪು ಬಳಿ ಕಾಂಕ್ರೀಟ್ ಹೆದ್ದಾರಿಯ ಪ್ರಾರಂಭದಲ್ಲಿ ಬಾಕಿ ಇರುವ ಕಾಮಗಾರಿ ಪ್ರಸ್ತುತ ಆರಂಭಗೊಂಡಿದೆ. ಅದರ ಮುಂದಿನ ಕಾಮಗಾರಿಯನ್ನು ಹೆದ್ದಾರಿ ಪ್ರಾಧಿಕಾರ ನಿರ್ವಹಿಸಲಿದೆ.
Kshetra Samachara
17/11/2021 05:59 pm