ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಚೆಂಡಿನ ಗದ್ದೆಯಲ್ಲಿ ಬಂಟ್ವಾಳ ಕೃಷಿ ಇಲಾಖೆಯ ವತಿಯಿಂದ ಮಾಡಲಾದ ಭತ್ತ ಬೇಸಾಯದ ಕಟಾವು ಕಾರ್ಯಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ದ.ಕ., ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಹಡೀಲು ಗದ್ದೆಗಳಲ್ಲಿ ಹೆಚ್ಚಿನ ಪ್ರಮಾಣದ ಭತ್ತದ ಕೃಷಿ ಮಾಡಲಾಗಿದೆ. ಪೊಳಲಿ ದೇವಸ್ಥಾನದ ಚೆಂಡಿನ ಗದ್ದೆಯಲ್ಲಿ ಹಿಂದೆ ಸ್ಥಳೀಯರೇ ಬೇಸಾಯ ಮಾಡುತ್ತಿದ್ದು, ಈ ಬಾರಿ ಕೃಷಿ ಇಲಾಖೆಯಿಂದ ಯಂತ್ರೋಪಕರಣದ ಮೂಲಕ ಭತ್ತ ಬೆಳೆಯಲಾಗಿದೆ. ಉತ್ತಮ ಫಸಲು ಕೂಡ ಬಂದಿದ್ದು, ಕೃಷಿ ಯಾವತ್ತೂ ನಷ್ಟವನ್ನುಂಟು ಮಾಡುವುದಿಲ್ಲ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.
ಕೇಂದ್ರ ಸರಕಾರವು 1960 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ನ. 15ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿದೆ. ರೈತರು ನೋಂದಣಿ ಮಾಡಿಕೊಂಡು ನಿಗದಿತ ಕೇಂದ್ರಗಳಿಗೆ ಭತ್ತವನ್ನು ನೀಡಬಹುದಾಗಿದ್ದು, ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಕಾರ್ಮಿಕರ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಭತ್ತಯ ಬೇಸಾಯವನ್ನು ರೈತರು ಕಡಿಮೆ ಮಾಡಿದ ಕಾರಣದಿಂದ ಅಕ್ಕಿಯ ಮಿಲ್ಲ್ಗಳಲ್ಲಿ ಕಡಿಮೆ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಈ ಬಾರಿ ಹೆಚ್ಚಿನ ಭತ್ತದ ಬೇಸಾಯವಾದ ಕಾರಣ ಕೆಲವೊಂದು ತೊಂದರೆಗಳು ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಅದು ನಿವಾರಣೆಯಾಗಲಿದೆ ಎಂದರು.
ಪೊಳಲಿ ಕ್ಷೇತ್ರದ ಅನಂತಪದ್ಮನಾಭ ಭಟ್ ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಇಲಾಖೆಯ ಸಹಾಯಕ ನಿರ್ದೇಶಕ ಚೆನ್ನಕೇಶವಮೂರ್ತಿ, ತಾಂತ್ರಿಕ ಕೃಷಿ ಅಧಿಕಾರಿ ನಂದನ್ ಶೆಣೈ, ತಾ.ಪಂ.ಮಾಜಿ ಸದಸ್ಯ ಯಶವಂತ ಪೊಳಲಿ, ನೇರಳಕಟ್ಟೆ ಸಿಎ ಬ್ಯಾಂಕ್ ಅಧ್ಯಕ್ಷ ಪುಷ್ಪರಾಜ ಚೌಟ, ಪೊಳಲಿ ಸಿಎ ಬ್ಯಾಂಕ್ ಉಪಾಧ್ಯಕ್ಷ ವೆಂಕಟೇಶ ನಾವಡ, ಗುರುಪುರ ಗ್ರಾ.ಪಂ.ಸದಸ್ಯ ಸಚಿನ್ ಅಡಪ, ಬಂಟ್ವಾಳ ಬಿಜೆಪಿ ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವಾಮದಪದವು, ಪೊಳಲಿ ಸರಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ರಾಧಾಕೃಷ್ಣ ಭಟ್, ಅಮ್ಮುಂಜೆ ಗ್ರಾ.ಪಂ.ಸದಸ್ಯ ಕಾರ್ತಿಕ್ ಬಳ್ಳಾಲ್, ಪ್ರಮುಖರಾದ ಸುಕೇಶ್ ಚೌಟ, ಸುಬ್ರಾಯ ಕಾರಂತ, ಭಾಸ್ಕರ ಭಟ್, ಕಿಶೋರ್ ಪಲ್ಲಿಪಾಡಿ ಮೊದಲಾದವರಿದ್ದರು.
Kshetra Samachara
17/11/2021 05:48 pm