ಬಂಟ್ವಾಳ: ದ.ಕ.ಜಿಲ್ಲೆಯ ರಾಷ್ಟ್ರೀಕೃತ, ಖಾಸಗಿ, ಸ್ಥಳೀಯ ಬ್ಯಾಂಕ್‌ಗಳು, ನಬಾರ್ಡ್ ಮತ್ತು ಇತರೆ ಸರಕಾರಿ ಇಲಾಖೆ ಸಹಯೋಗದೊಂದಿಗೆ ಅ. 30ರಂದು ಬೆಳಗ್ಗೆ 10ಕ್ಕೆ ಬಿ.ಸಿ.ರೋಡಿನ ಬಂಟರ ಭವನದಲ್ಲಿ ಜಿಲ್ಲಾ ಮಟ್ಟದ ಸಾಲ ಸಂಪರ್ಕ ಕಾರ್ಯಕ್ರಮ ಹಾಗೂ ಮಾಹಿತಿ ಕಾರ್ಯಾಗಾರ ನಡೆಯಲಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಹೇಳಿದರು.
ಅವರು ಬಂಟರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಬ್ಯಾಂಕ್‌ಗಳಲ್ಲಿ ಲಭ್ಯವಿರುವ ಸಾಲ ಸೌಲಭ್ಯಗಳ ಅರಿವು ಮೂಡಿಸಲು ಹಾಗೂ ಕೇಂದ್ರ-ರಾಜ್ಯ ಸರಕಾರಗಳ ವಿವಿಧ ಯೋಜನೆಗಳ ಮಾಹಿತಿ ನೀಡಲು ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಮುದ್ರಾ ಸಾಲ ಯೋಜನೆಯಲ್ಲಿ ದ.ಕ.ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದ್ದು, ಜನಧನ್ ಖಾತೆಯಲ್ಲಿ 100 ಶೇ. ಪ್ರಗತಿ ಸಾಧಿಸಿದೆ.
ವಿವಿಧ ಬ್ಯಾಂಕ್‌ಗಳ ಸ್ಟಾಲ್‌ಗಳ ಮೂಲಕ ಸಾಲ ಅರ್ಜಿ ಸ್ವೀಕಾರ, ಮಂಜೂರಾತಿ, ತಾತ್ವಿಕ ಮಂಜೂರಾತಿ ಪತ್ರ ವಿತರಣಾ ಕಾರ್ಯವೂ ನಡೆಯಲಿದೆ. ಗ್ರಾಮೀಣ ಭಾಗದಲ್ಲಿ ಬ್ಯಾಂಕ್‌ಗಳಲ್ಲಿ ಭಾಷಾ ಸಮಸ್ಯೆಯ ಕುರಿತು ಹಲವು ದೂರುಗಳಿದ್ದು, ಅದರ ನಿವಾರಣೆಯ ದೃಷ್ಟಿಯಿಂದ ಸ್ಥಳೀಯ ಭಾಷೆಯ ಕನಿಷ್ಠ ಓರ್ವ ಸಿಬಂದಿಯನ್ನು ನಿಯೋಜಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ ಎಂದರು.
ಕಾರ್ಯಕ್ರಮವನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬ ಉದ್ಘಾಟಿಸಲಿದ್ದು, ಮೀನುಗಾರಿಕೆ-ಬಂದರು ಇಲಾಖೆ ಸಚಿವ ಎಸ್.ಅಂಗಾರ, ಸಾಮಾಜ ಕಲ್ಯಾಣ-ಹಿಂಉಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದ.ಕ.ಸಂಸದ ನಳಿನ್‌ಕುಮಾರ್ ಕಟೀಲು ಭಾಗವಹಿಸಲಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಜಿಲ್ಲಾಽಕಾರಿ ಡಾ| ರಾಜೇಂದ್ರ ಕೆ.ವಿ, ಜಿ.ಪಂ.ಸಿಇಒ ಡಾ| ಕುಮಾರ್, ಕೆನರಾ ಬ್ಯಾಂಕ್ ಮಹಾಪ್ರಬಂಧಕ ಯೋಗೀಶ್ ಆಚಾರ್ಯ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಎಂ.ಪಿ, ಎಂಇಐ ಲಿಮಿಟೆಡ್ ಅಧ್ಯಕ್ಷ ಸಂತೋಷ್‌ಕುಮಾರ್ ರೈ, ಬೂಡ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
28/10/2021 06:18 pm