ಕಡಬ: ಇಲ್ಲಿನ ತಹಶೀಲ್ದಾರ್ ಕಚೇರಿಯ ಸಮೀಪದ ಗುರುಕೃಪಾ ಕಟ್ಟಡದಲ್ಲಿ ನೀತಿ ತಂಡ ಐದನೇ ವರ್ಷಕ್ಕೆ ಕಾಲಿಡುತ್ತಿರುವ ಸವಿನೆನಪಿಗಾಗಿ ನೀತಿ ತಂಡದ ತಾಲೂಕು ಕಚೇರಿ ಉದ್ಘಾಟನೆಗೊಂಡಿತು.
ನೀತಿ ತಂಡದ ಸಂಸ್ಥಾಪಕ ಮತ್ತು ರಾಜ್ಯಾಧ್ಯಕ್ಷ ಜಯತ್ ಟಿ. ಕಚೇರಿ ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕಡಬ ತಾಲೂಕು ಸಮಿತಿ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ವಿಕ್ಟರ್ ಮಾರ್ಟಿಸ್, ಸಾಮಾಜಿಕವಾಗಿ ಬೆಳೆದು ಬಂದ ನೀತಿ ಸಂಘಟನೆ ಗ್ರಾಮ ಮಟ್ಟದಿಂದಲೇ ಗಟ್ಟಿಗೊಂಡಿರುವುದು ಹೆಮ್ಮೆಯ ಸಂಗತಿ.
ಸಮಾಜದಲ್ಲಿ ಯುವ ಸಮುದಾಯವನ್ನು ನೀತಿವಂತರನ್ನಾಗಿಸಿ ಸಂವಹನ ಕಲೆ ಮತ್ತು ಶಕ್ತರನ್ನಾಗಿಸುವ ನೀತಿ ತಂಡದ ಪ್ರಯತ್ನ ಮುಂದುವರಿಯಲಿ ಎಂದರು.
ಜಯಂತ್ ಟಿ. ಮಾತನಾಡಿ, ಇಚಿಲಂಪಾಡಿ ಎಂಬ ಸಣ್ಣ ಗ್ರಾಮದಲ್ಲಿ ನೊಂದ ಮನಸುಗಳ ಸೇರುವಿಕೆಯಿಂದ ಹುಟ್ಟಿಕೊಂಡ ಈ ಸಂಘಟನೆ ಇಂದು ರಾಜ್ಯಮಟ್ಟದಲ್ಲಿ ಕಾರ್ಯಾಚರಣೆ ಮಾಡುತ್ತಿದೆ.
ರಸ್ತೆ ದುರಸ್ತಿ, ಸರ್ಕಾರಿ ಕಚೇರಿಗಳಲ್ಲಿ ವಿಳಂಬ ನೀತಿ,ಆಸ್ಪತ್ರೆಗಳಲ್ಲಿ ಜನ ಸಾಮಾನ್ಯರಿಗೆ ಆಗುವ ತೊಂದರೆ ಹೀಗೆ ಹಲವು ನೀತಿಯಲ್ಲಿ ಹೋರಾಟಗಳು ನಡೆದಿದೆ.
ಕಡಬದ ಈ ಕಚೇರಿ ಇನ್ನು ಮಾಹಿತಿ ಹಕ್ಕು ಕೇಂದ್ರವಾಗಿಯೂ ಕಾರ್ಯಾಚರಿಸಲಿದ್ದು, ಆಸಕ್ತರಿಗೆ ತರಬೇತಿ, ಮಾರ್ಗದರ್ಶನ ಸಿಗಲಿದೆ ಎಂದರು.
ಜಿಲ್ಲಾಧ್ಯಕ್ಷ ಪ್ರಮೋದ್ , ಕಡಬ ತಾಲೂಕು ಸಮಿತಿ ಅಧ್ಯಕ್ಷ ರಂಜಿತ್,ನೀತಿ ತಂಡದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಕಾಶ್ ಕೋಡಿಂಬಾಳ, ವಿ.ಕೆ. ಕಡಬ ಕಾರ್ಯಕ್ರಮ ನಿರ್ವಹಿಸಿದರು.
Kshetra Samachara
07/10/2020 08:37 am