ಸುಳ್ಯ: ಶಿರಾ ಹಾಗೂ ರಾಜರಾಜೇಶ್ವರಿ ನಗರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಎದುರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರ ನಮ್ಮ ನಾಯಕ ಡಿ.ಕೆ.ಶಿವಕುಮಾರ್ ಮನೆಗೆ ಸಿಬಿಐ ಛೂ ಬಿಟ್ಟು ಅವರ ಪ್ರಭಾವ ಕುಗ್ಗಿಸುವ ಕುತಂತ್ರ ನಡೆಸುತ್ತಿದೆ.
ಬಿಜೆಪಿ ಸರಕಾರದ ಈ ನೀತಿಯನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಧನಂಜಯ ಅಡ್ಪಂಗಾಯ ಹೇಳಿದರು.
ಅವರು ಇಂದು ಸುಳ್ಯದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 2017 ರಿಂದ ಡಿ.ಕೆ.ಶಿವಕುಮಾರ್ ರಿಗೆ ಇಲ್ಲಿಯ ತನಕ ಐಟಿ, ಇಡಿ, ಜಾರಿ ನಿರ್ದೇಶನಾಲಯ ಹೀಗೆ ಒಂದರ ಮೇಲೊಂದರಂತೆ ಅಧಿಕಾರಿಗಳ ತಂಡವನ್ನು ಕಳುಹಿಸಿ ತನಿಖೆ ನಡೆಸಲಾಗುತ್ತಿದೆ.
ಎಲ್ಲಿಯೂ ಈ ತನಕ ಅಪರಾಧ ಮಾತ್ರ ಸಾಬೀತಾಗಿಲ್ಲ. ಈಗ ಮತ್ತೊಮ್ಮೆ ಸಿಬಿಐ ಯವರನ್ನು ಬಿಟ್ಟು ಸರಕಾರವು ತೇಜೋವಧೆಗೆ ಮುಂದಾಗಿದೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ಈ ದೇಶದಲ್ಲಿ ಡಿ.ಕೆ.ಶಿವಕುಮಾರ್ ಮಾತ್ರ ಕಾಣುತ್ತಿದ್ದಾರಾ. ಆರ್ಥಿಕ ಅಪರಾಧ ಮಾಡಿ ಓಡಿ ಹೋದವರು ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಸರಕಾರ ಏನೇ ಕುತಂತ್ರ ನಡೆಸಿದರೂ ನಮ್ಮ ನಾಯಕ ಡಿ.ಕೆ ಶಿವಕುಮಾರ್ ಎದೆಗುಂದದೆ ಎಲ್ಲವನ್ನೂ ಎದುರಿಸಿದ್ದಾರೆ. ಅವರಿಗೆ ನಾವೆಲ್ಲರೂ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಹೇಳಿದ ಅವರು, ಸರಕಾರದ ವಿರುದ್ಧ ಯಾರೇ ಮಾತನಾಡಿದರೂ ಅವರನ್ನು ದಮನಿಸುವ ಕೆಲಸ ನಿರಂತರವಾಗಿ ಬಿಜೆಪಿ ಸರಕಾರದಿಂದ ಆಗುತ್ತಿದೆ ಎಂದು ಆರೋಪಿಸಿದರು.
ಹಿರಿಯ ನಾಯಕ ಭರತ್ ಮುಂಡೋಡಿ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಹಾಗೂ ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.
Kshetra Samachara
07/10/2020 07:58 am