ಬಪ್ಪನಾಡು ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶವಿಲ್ಲ ಎಂದು ಹೇಳಿ ಬ್ಯಾನರ್ ಹಾಕಿರುವುದರ ಹಿಂದೆ ಜಿಲ್ಲಾಡಳಿತದ ಕುಮ್ಮಕ್ಕು ಇರುವ ಅನುಮಾನ ಕಾಡುತ್ತಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಆರೋಪಿಸಿದ್ದಾರೆ. ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರೋ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಆ ಬ್ಯಾನರ್ ಹಾಕಿಲ್ಲ. ಇದಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಕ್ಷೇತ್ರದ ಆಡಳಿತ ಸಮಿತಿ ಸ್ಪಷ್ಟನೆ ನೀಡಿದ್ದರೂ ಇನ್ನೂ ಬ್ಯಾನರ್ ತೆರವುಗೊಳಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಕೂಡಾ ವೌನ ವಹಿಸಿದ್ದಾರೆ ಎಂದು ಜಿಲ್ಲಾಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು.
ದ.ಕ. ಜಿಲ್ಲೆಯನ್ನು ಕೋಮು ಗಲಭೆಗೆ ಪ್ರಯೋಗಶಾಲೆಯಾಗಿ ಉಪಯೋಗಿಸುವ ಕೆಲಸವನ್ನು ಮಾಡಲಾಗುತ್ತಿದ್ದು, ಪುಂಡ ಪೋಕರಿಗಳ ಕೆಲಸಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮಿಥುನ್ ರೈ ಎಚ್ಚರಿಸಿದರು.
Kshetra Samachara
24/03/2022 03:25 pm