ನಯರ ಎನರ್ಜಿ ಕಂಪೆನಿ ಏಕಾಏಕಿ ಯಾವುದೇ ಮುನ್ಸೂಚನೆಯಿಲ್ಲದೆ ರಾಜ್ಯಾದ್ಯಂತ ಇರುವ ಪೆಟ್ರೋಲ್ ಬಂಕ್ ಗಳಿಗೆ ತೈಲ ಸರಬರಾಜು ಸ್ಥಗಿತಗೊಳಿಸಿದೆ. ಪರಿಣಾಮ ಪೆಟ್ರೋಲ್ ಬಂಕ್ ಮಾಲೀಕರು ಅನಿವಾರ್ಯವಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದಾರೆ. ಆದ್ದರಿಂದ ತಕ್ಷಣ ಕಂಪೆನಿ, ತೈಲ ಸರಬರಾಜು ಮಾಡಬೇಕೆಂದು ಆಗ್ರಹಿಸಿ ಪೆಟ್ರೋಲ್ ಬಂಕ್ ಮಾಲೀಕರು ತಣ್ಣೀರುಬಾವಿ ಬೀಚ್ ರಸ್ತೆ ನಯರ ಡೀಪೊ ಬಳಿ ಪ್ರತಿಭಟನೆ ನಡೆಸಿದ್ದಾರೆ.
ನಯರ ಎನರ್ಜಿ ಕಂಪೆನಿಯಿಂದ ಮಾನ್ಯತೆ ಪಡೆದ 500- 600 ಪೆಟ್ರೋಲ್ ಬಂಕ್ ಗಳು ರಾಜ್ಯಾದ್ಯಂತ ಕಾರ್ಯಾಚರಿಸುತ್ತಿದೆ. ಮಾಲೀಕರು 1- 2 ಕೋಟಿ ರೂ. ನಯರ ಕಂಪೆನಿಗೆ ಖರ್ಚು ಮಾಡಿ ಪೆಟ್ರೋಲ್ ಬಂಕ್ ಆರಂಭಿಸಿದ್ದರು. ಆದರೆ, ಮಾರ್ಚ್ 23ರಿಂದ ಸ್ಟಾಕ್ ಇದ್ದರೂ ಕಂಪೆನಿ, ಸರಿಯಾಗಿ ತೈಲ ಪೂರೈಕೆ ಮಾಡುತ್ತಿಲ್ಲ.
ತಾವು ಬೇಡಿಕೆ ಇಟ್ಟಿರುವಷ್ಟು ತೈಲಕ್ಕೆ ಲಕ್ಷಾಂತರ ರೂ. ಕಂಪೆನಿಗೆ ಪಾವತಿಸಿದ್ದರೂ, ನಮಗೆ ಇನ್ನೂ ತೈಲ ಪೂರೈಕೆ ಆಗಿಲ್ಲ. ಪರಿಣಾಮ ತಾವು 5-6 ದಿನಗಳಿಂದ ವ್ಯಾಪಾರ ಸ್ಥಗಿತಗೊಳಿಸಿದ್ದೇವೆ ಎಂದು ಪೆಟ್ರೋಲ್ ಬಂಕ್ ಮಾಲೀಕರು ಅವಲತ್ತುಕೊಂಡಿದ್ದಾರೆ.
ಆದ್ದರಿಂದ ದ.ಕ. ಜಿಲ್ಲಾಧಿಕಾರಿಯವರು ನಯರ ಎನರ್ಜಿ ಕಂಪೆನಿಯ ಡಿಪೋಗೆ ಬಂದು ತೈಲ ಸ್ಟಾಕ್ ಪರೀಕ್ಷಿಸಿ ತಕ್ಷಣದಿಂದ ನಮಗೆ ತೈಲ ಪೂರೈಸಬೇಕು. ಇಲ್ಲದಿದ್ದಲ್ಲಿ ತಾವು ಅನಿರ್ದಿಷ್ಟಾವಧಿ ಮುಷ್ಕರ ಹೂಡುತ್ತೇವೆ ಎಂದು ಪೆಟ್ರೋಲ್ ಬಂಕ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
31/03/2022 04:00 pm